ನಿರೀಕ್ಷೆಯನ್ನು ಕಳೆದುಕೊಳ್ಳಬೇಡ

೧ ಜೀವನವು ಯಾವಾಗಲೂ ಸುಲಭವಾಗಿರುವದಿಲ್ಲ

ನಾವೆಲ್ಲರೂ ಜೀವನದ ಪ್ರಯಾಣವನ್ನು ಅನೇಕ ಕನಸುಗಳು, ಗುರಿಗಳು, ಆಕಾಂಕ್ಷೆಗಳು ಮತ್ತು ಹೆಬ್ಬಯಕೆಗಳೊಂದಿಗೆ ಪ್ರಾರಂಭಿಸುತ್ತೇವೆ. ಮಹದಾದ ಉತ್ಸಾಹದೊಂದಿಗೆ, ನಾವೇನು ಮಾಡಬೇಕು, ಎಲ್ಲಿಗೆ ಹೋಗಬೇಕು, ಮತ್ತು ಜೀವನದಲ್ಲಿ ಏನಾಗಬೇಕು ಎಂದು ಬಯಸುತ್ತೇವೆಯೋ ಅವುಗಳಿಗಾಗಿ ನಾವು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ. ಆದರೆ, ಪ್ರಯಾಣದ ಮಧ್ಯದಲ್ಲಿ ಎಲ್ಲೋ, ನಾವು ಖಂಡಿತವಾಗಿಯೂ ಅಲ್ಲಕಲ್ಲೋಲವಾದ ವಾತಾವರಣದೊಳಗೆ ಸಿಕ್ಕಿಕೊಳ್ಳುತ್ತೇವೆ.

ಜೀವನವು ಯಾವಾಗಲೂ ಸುಲಭವಾಗಿರುವದಿಲ್ಲ. ನಾವು ಜೀವನವು ಕಥೆ ಪುಸ್ತಕದಂತೆ ಸರಳವಾಗಿರಬೇಕೆಂದು ಬಯಸುತ್ತೇವೆ. ಆದರೆ ಅದು ಯಾವಾಗಲೂ ಹಾಗೆ ಇರುವದಿಲ್ಲ! ಅನಿರೀಕ್ಷಿತವಾದ ಸವಾಲುಗಳು, ಕಷ್ಟಗಳು ಮತ್ತು ಪರಿಸ್ಥಿತಿಗಳು ಮಾರ್ಗ ಮಧ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಅಂಥ ಸಮಯಗಳಲ್ಲಿ ನಮ್ಮ ಗುರಿಗಳು ಮತ್ತು ಕನಸುಗಳು ಕಣ್ಮರೆಯಾದಂತೆ ಅನ್ನಿಸುತ್ತವೆ. ಕೆಲವೊಮ್ಮೆ, ಬಹುತೇಕ ನಿರೀಕ್ಷೆಯೇ ಇಲ್ಲದ ಪರಿಸ್ಥಿತಿಗಳ ನಡುವೆ ನಾವು ಸಿಕ್ಕಿಕೊಂಡಿದ್ದೇವೇನೋ ಎಂದು ನಮಗೆ ಅನ್ನಿಸುತ್ತದೆ. ನಾವು ನಿರೀಕ್ಷೆ ಕಳೆದುಕೊಳ್ಳುತ್ತಿರುವಂತೆ ಆಗುತ್ತದೆ. ನಾವು ಬಿಟ್ಟುಬಿಡುವ ಸ್ಥಿತಿಗೆ ಬರುತ್ತೇವೆ. “ನನ್ನಿಂದ ಇದು ಸಾಧ್ಯವಾಗುವದಿಲ್ಲ” ಅಥವಾ “ನನ್ನ ಗುರಿಗಳನ್ನು ಸಾಧಿಸಲು ನನ್ನಿಂದ ಎಂದಿಗೂ ಆಗುವದಿಲ್ಲ” ಎಂಬದಾಗಿ ಆಲೋಚಿಸಲು ನಾವು ಪ್ರಾರಂಭಿಸುತ್ತೇವೆ. ನಮ್ಮ ಗುರಿಗಳನ್ನು ತಲುಪಲು ಎಂದಾದರೂ ನಮ್ಮಿಂದ ಆಗುತ್ತದೆಯೇ ಎಂಬ ಚಿಂತೆಗೆ ನಾವು ಒಳಗಾಗುತ್ತೇವೆ.

ಕೆಲವೊಮ್ಮೆ, ಜೀವನವು ಅನಿರೀಕ್ಷಿತವಾದ ತಿರುವುಗಳನ್ನು ತೆಗೆದುಕೊಳ್ಳುತ್ತದೆ, ಮತ್ತು ನಮ್ಮನ್ನು ಪ್ರಸ್ತುತಪಡಿಸಲು ಸಂಪೂರ್ಣವಾಗಿ ಸಿದ್ಧರಾಗಿರದ ಪರಿಸ್ಥಿತಿಗಳನ್ನು ಒಡ್ಡುತ್ತದೆ. ಯಾವ ಕಡೆಯೂ ತಿರುಗಲಾರದಂಥ ರಸ್ತೆಗೆ ಕೊನೆಗೆ ಬಂದುಬಿಟ್ಟಿರುವಂತೆ ನಮಗೆ ಅನ್ನಿಸುತ್ತದೆ. ಈ ಪುಸ್ತಕವನ್ನು ಓದುತ್ತಿರುವವರಲ್ಲಿ ಕೆಲವರು ನಿರೀಕ್ಷೆಯಿಲ್ಲದ ಪರಿಸ್ಥಿತಿಗಳ ನಡುವೆ ಇರಬಹುದು. ಅದು ನಿಮ್ಮ ಉದ್ಯೋಗ, ಭವಿಷ್ಯ, ವಿದ್ಯಾಭ್ಯಾಸ, ಮನೆ, ಮದುವೆ ಅಥವಾ ಕುಟುಂಬಕ್ಕೆ ಸಂಬಂಧಿಸಿದ ವಿಷಯವಾಗಿರಬಹುದು. ಜೀವನದಲ್ಲಿ ಬಹಳಷ್ಟು ಕಾರ್ಯಗಳು ತಪ್ಪಾಗಿರಬಹುದು. ಆದರೆ ನಾನು ನಿಮಗೆ ಪ್ರೋತ್ಸಾಹಪಡಿಸುವದು ಏನೆಂದರೆ ಸತ್ಯವೇದದ ದೇವರು ಸತ್ತವರಿಗೆ—ಜೀವವಿಲ್ಲದಂತೆ ಮತ್ತು ನಿರೀಕ್ಷೆಯಿಲ್ಲದಂತೆ ತೋರುವ ಪರಿಸ್ಥಿತಿಗಳು ಮತ್ತು ಸಂದರ್ಭಗಳಿಗೆ ಜೀವವನ್ನು ಕೊಡುವದರಲ್ಲಿ ವಿಶೇಷವಾದ ಪರಿಣಿತನಾಗಿದ್ದಾನೆ. ಆತನು ನಿರೀಕ್ಷೆಯಿಲ್ಲದ ಪರಿಸ್ಥಿತಿಗಳನ್ನು ಬದಲಾಯಿಸುವದರಲ್ಲಿ ವಿಶೇಷ ಪರಿಣಿತನಾಗಿದ್ದಾನೆ. ಆಮೆನ್! ಆತನು ನಿಮ್ಮ ಕಡೆ ಇರುವಾಗ, ನೀವು ನಿರೀಕ್ಷೆಗೆ ವಿರುದ್ಧವಾಗಿ ನಿರೀಕ್ಷಿಸಬಹುದು. ಎಲ್ಲವೂ ನಿರೀಕ್ಷೆ ಇಲ್ಲದಂತೆ ಅನ್ನಿಸಿದರೂ, ನೀವು ಜಯಶಾಲಿಯಾಗಿ ಹೊರಹೊಮ್ಮುವಿರಿ. ಈ ಪುಸ್ತಕವು ಪ್ರೋತ್ಸಾಹದ ಸರಳವಾದ ಮಾತುಗಳನ್ನು ತಿಳಿಸುತ್ತದೆ ಮತ್ತು ನಾವು ನಿರೀಕ್ಷೆಯನ್ನು ಕಳೆದುಕೊಳ್ಳಬಾರದೆಂದು ಪ್ರಬೋಧಿಸುತ್ತದೆ.

ನಿರೀಕ್ಷೆಯುಳ್ಳವರಾಗಿರುವದರ ಪ್ರಾಮುಖ್ಯತೆ

ನಿರೀಕ್ಷೆಯುಳ್ಳವರಾಗಿರುವದು ಅತ್ಯಂತ ಪ್ರಾಮುಖ್ಯವಾಗಿದೆ. “ನಿರೀಕ್ಷೆ” ಅಂದರೆ ನಾವು ಹೇಳುವದು ಪೂರ್ವ ನಿರೀಕ್ಷಣೆ, ನಿರೀಕ್ಷಿಸುವದು, ಏನನ್ನಾದರೂ ಎದುರುನೋಡುವದು, ಬಯಕೆ, ಕನಸು ಅಥವಾ ಆಕಾಂಕ್ಷೆ. ಕ್ರೈಸ್ತನ ಜೀವಿತದ ಪ್ರಾಮುಖ್ಯವಾದ ಸಂಗತಿಗಳಲ್ಲಿ ಒಂದು ನಿರೀಕ್ಷೆಯಾಗಿದೆ. ನಮ್ಮ ಕ್ರೈಸ್ತೀಯ ನಡಿಗೆಯಲ್ಲಿ ಪ್ರಾಮುಖ್ಯವಾಗಿರುವ ಮೂರು ಕಾರ್ಯಗಳನ್ನು ಸತ್ಯವೇದವು ತಿಳಿಸುತ್ತದೆ; ಅವುಗಳಲ್ಲಿ ಒಂದು ನಿರೀಕ್ಷೆಯಾಗಿದೆ.

1 ಕೊರಿಂಥದವರಿಗೆ 13:13

ಹೀಗಿರುವದರಿಂದ ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ.

೨ ನಿರೀಕ್ಷೆ—ನಮ್ಮ ಕ್ರೈಸ್ತೀಯ ಜೀವಿತದ ಬಹಳ ಪ್ರಾಮುಖ್ಯವಾದ ಭಾಗವಾಗಿದೆ

ವಿಶ್ವಾಸಿಗಳಾಗಿ, ನಾವು ಇನ್ನೂ ಬರಬೇಕಿರುವ ಅನೇಕ ವಿಷಯಗಳಿಗಾಗಿ ನಿರೀಕ್ಷೆಯುಳ್ಳವರಾಗಿದ್ದೇವೆ.

ನಿತ್ಯಜೀವದ ನಿರೀಕ್ಷೆ

ತೀತನಿಗೆ 1:2

ಸುಳ್ಳಾಡದ ದೇವರು ಆ ನಿತ್ಯಜೀವವನ್ನು ಕೊಡುತ್ತೇನೆಂದು ಅನಾದಿಕಾಲದಲ್ಲಿ ವಾಗ್ದಾನ ಮಾಡಿದ್ದಾನೆ,

ನಾವು ನಿತ್ಯಜೀವವನ್ನು ನಿರೀಕ್ಷಿಸುತ್ತಿದ್ದೇವೆ. ನಿತ್ಯಜೀವವು ನಮ್ಮ ಆತ್ಮದಲ್ಲಿ ಇದೆಯಾದರೂ, ನಾವು ಎದುರುನೋಡುವವುಗಳಲ್ಲಿ ಅದುವೂ ಇದೆ.

ಮಹಿಮೆಯ ನಿರೀಕ್ಷೆ

ಕೊಲೊಸ್ಸೆಯವರಿಗೆ 1:27

ಅನ್ಯಜನಗಳ ವಿಷಯವಾದ ಈ ಮರ್ಮದ ಮಹಿಮಾತಿಶಯವು ಎಷ್ಟೆಂಬುದನ್ನು ದೇವರು ತನ್ನ ಜನರಿಗೆ ತಿಳಿಸಲು ಮನಸ್ಸು ಮಾಡಿಕೊಂಡನು. ಈ ಮರ್ಮವು ಏನಂದರೆ ಕ್ರಿಸ್ತನು ನಿಮ್ಮಲ್ಲಿದ್ದು ಪ್ರಭಾವದ ನಿರೀಕ್ಷೆಗೆ ಆಧಾರಭೂತನಾಗಿರುವದೇ.

ನಮ್ಮಲ್ಲಿರುವ ಕ್ರಿಸ್ತನು ನಮ್ಮ ಪ್ರಭಾವದ ನಿರೀಕ್ಷೆಯಾಗಿದ್ದಾನೆ. ನಾವು ಈಗ ವಾಸಮಾಡುತ್ತಿರುವದಕ್ಕಿಂತಲೂ ಎಷ್ಟೋ ಉತ್ತಮವಾದ, ಮುಂಬರುವ ಲೋಕದಲ್ಲಿನ ನಮ್ಮ ಜೀವನಕ್ಕೆ ಆತನೇ ನಮ್ಮ ನಿರೀಕ್ಷೆಯಾಗಿದ್ದಾನೆ. ನಾವು ಪರಲೋಕದ ನಮ್ಮ ದೇವರ ಪ್ರಸನ್ನತೆಯಲ್ಲಿ ಆತನೊಂದಿಗಿನ ನಮ್ಮ ಸಮಯವನ್ನು ಎದುರುನೋಡುವವರಾಗಿದ್ದೇವೆ.

ರಕ್ಷಣೆಯ ನಿರೀಕ್ಷೆ

1 ಥೆಸಲೋನಿಕದವರಿಗೆ 5:8

ನಾವಾದರೋ ಹಗಲಿನವರಾಗಿರಲಾಗಿ ವಿಸ್ವಾಸಪ್ರೀತಿಗಳೆಂಬ ವಜ್ರಕವಚವನ್ನೂ ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.

1 ಪೇತ್ರನು 1:7-9

7 ಬಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟಹಾಕಿ ಶೋಧಿಸುವದುಂಟಷ್ಟೆ. ಬಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು.
8 ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ.
9 ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮರಕ್ಷಣೆಯನ್ನು ಹೊಂದುವವರಾಗಿ ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.

ರಕ್ಷಣೆಯು ಈಗ ಪ್ರಾರಂಭವಾಗುತ್ತದೆಯಾದರೂ, ನಮ್ಮ ರಕ್ಷಣೆಯ ಭಾಗವು ಇನ್ನೂ ಇದ್ದು ಅದನ್ನು ನಾವು ಎದುರುನೋಡುವವರಾಗಿದ್ದೇವೆ.

ಕ್ರಿಸ್ತನ ಎರಡನೇ ಬರೋಣದ ನಿರೀಕ್ಷೆ

ತೀತನಿಗೆ 2:13

ಭಾಗ್ಯಕರವಾದ ನಿರೀಕ್ಷೆಯನ್ನು ಅಂದರೆ ಮಹಾದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಪ್ರಭಾವದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ,

ಪುನರುತ್ಥಾನದ ನಿರೀಕ್ಷೆ

ಅಪೊಸ್ತಲರ ಕೃತ್ಯಗಳು 24:15

ಇನ್ನೂ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು ಇವರು ದೇವರಲ್ಲಿ ನಿರೀಕ್ಷೆಯಿಟ್ಟಿರುವ ಪ್ರಕಾರವೇ ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ;

೩ ನಿರೀಕ್ಷೆಯ ಪ್ರಾಮುಖ್ಯತೆ

ನಮ್ಮ ಅನುದಿನದ ಜೀವಿತದಲ್ಲಿ ನಿರೀಕ್ಷೆಯುಳ್ಳವರಾಗಿರುವದು ಬಹಳ ಪ್ರಾಮುಖ್ಯವಾಗಿದೆ. ನಿರೀಕ್ಷೆಯಿಲ್ಲದ ಪರಿಸ್ಥಿತಿಯ ನಡುವೆಯೂ ನಾವು ಪೂರ್ಣ ನಿರೀಕ್ಷೆಯುಳ್ಳ ಜನರಾಗಿರಬೇಕು. ನಿರೀಕ್ಷೆಯುಳ್ಳವರಾಗಿ ಮುಂದುವರೆಯುವದು ಯಾಕೆ ಪ್ರಾಮುಖ್ಯವಾಗಿದೆ ಎಂಬದಕ್ಕೆ ಹಲವು ಕಾರಣಗಳಿವೆ.

ನಿರೀಕ್ಷೆಯು ತಡವಾದರೆ/ಮುಂದೂಡಲ್ಪಟ್ಟರೆ ಆಂತರ್ಯ ಮನುಷ್ಯನು ದುರ್ಬಲನಾಗುತ್ತಾನೆ

ಜ್ಞಾನೋಕ್ತಿಗಳು 13:12

ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು; ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.

ಕೆಲವೊಮ್ಮೆ, ನಾವು ನಿರೀಕ್ಷಿಸಿದ ವಸ್ತುಗಳನ್ನು ಹೊಂದಲು ತಡವಾಗುತ್ತದೆ. ನಾವು ಯಾವುದೋ ಒಂದು ಕಾರ್ಯ ನಿರ್ದಿಷ್ಟವಾದ ವರ್ಷದಲ್ಲಿ ನೆರವೇರಬೇಕೆಂದು ನಿರೀಕ್ಷಿಸುತ್ತೇವೆ, ಆದರೆ ವರ್ಷವು ಕೊನೆಗೊಳ್ಳುವ ಸಮಯವಾದರೂ, ಅದು ಸಂಭವಿಸದೆ ಇರಬಹುದು. ಬಹುಶಃ ಮುಂದಿನ ವರ್ಷ ಆಗಬಹುದು ಎಂಬದಾಗಿ ನಾವು ನಮ್ಮೊಳಗೆ ಅಂದುಕೊಳ್ಳುತ್ತೇವೆ ಆದರೆ ಆಗಲೂ ಆಗುವದಿಲ್ಲ. ಯಾವ ಕಾರ್ಯಕ್ಕಾಗಿ ನಿರೀಕ್ಷಿಸಿದ್ದೆವೋ ಅದು ತಡವಾಗುವಾಗ, ಆಂತರ್ಯ ಮನುಷ್ಯನು ನಿರೀಕ್ಷೆಯನ್ನು ಕಳೆದುಕೊಳ್ಳಲು ಮುಂದಾಗಿ ಬಲಹೀನನಾಗುತ್ತಾನೆ. ಮತ್ತೊಂದು ಕಡೆಯಲ್ಲಿ, ನಮ್ಮ ನಿರೀಕ್ಷೆಯ ವಿಷಯವು ನೆರವೇರುವಾಗ, ಅದು ಜೀವಕರವಾದ ವೃಕ್ಷದಂತಿರುತ್ತದೆ. ಅದು ನಮಗೆ ಚೈತನ್ಯ ನೀಡುತ್ತದೆ ಮತ್ತು ನಮ್ಮ ದಣಿವಾರಿಸುತ್ತದೆ. ನಮಗೆ ಉಲ್ಲಾಸ ಮತ್ತು ನವೀನತೆಯ ಅನುಭವವಾಗುತ್ತದೆ. ನಮ್ಮ ನಂಬಿಕೆಯು ಮೇಲಕ್ಕೆ ಹೋಗುತ್ತದೆ. ನಾವು ಪ್ರೇರಣೆಗೊಳ್ಳುತ್ತೇವೆ ಮತ್ತು ಅಭಿವೃದ್ಧಿಯಾಗುತ್ತೇವೆ.

ನಿರೀಕ್ಷೆಯು ಪ್ರಾಣಕ್ಕೆ ಲಂಗರವಾಗಿದೆ

ಇಬ್ರಿಯ 6:19ಬಿ

ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು …

ನಿರೀಕ್ಷೆಯು ಪ್ರಾಣಕ್ಕೆ ಲಂಗರವಾಗಿದೆ. “ಪ್ರಾಣ” ಎಂಬ ಪದವು ಮನಸ್ಸು, ಚಿತ್ತ ಮತ್ತು ಭಾವನೆಗಳನ್ನು ಸೂಚಿಸುತ್ತದೆ. ಹಡಗಿನಿಂದ ಲಂಗರವನ್ನು ಕೆಳಗಿಳಿಸುವ ಸಾಮ್ಯವನ್ನು ನಮ್ಮ ಪ್ರಾಣದೊಂದಿಗೆ ಸಂಬಂಧವಿರುವ ನಿರೀಕ್ಷೆಯ ಪಾತ್ರವನ್ನು ವಿವರಿಸಲು ಇಲ್ಲಿ ಉಪಯೋಗಿಸಲಾಗಿದೆ. ಲಂಗರವನ್ನು ಸಮುದ್ರದೊಳಗೆ ಹಾಕುವಾಗ, ಅದು ಬಿರುಗಾಳಿಯ ನಡುವೆ ಸ್ಥಿರತೆಯನ್ನು ಒದಗಿಸುತ್ತದೆ. ಸತ್ಯವೇದವು ಹೇಳುವದೇನೆಂದರೆ ನಿರೀಕ್ಷೆಯು ಪ್ರಾಣಕ್ಕೆ ಲಂಗರವಾಗಿದೆ. ಇದರ ಅರ್ಥ ಒಂದುವೇಳೆ ನನಗೆ ನಿರೀಕ್ಷೆ ಇಲ್ಲದೆ ಹೋದರೆ, ನನ್ನ ಪ್ರಾಣ—ನನ್ನ ಚಿತ್ತ, ಭಾವನೆಗಳು ಮತ್ತು ಬುದ್ಧಿಶಕ್ತಿಗೆ— ಪ್ರಕ್ಷುಬ್ದ ಸಮಯಗಳಲ್ಲಿ ಅವಶ್ಯವಾಗಿರುವಂಥ ಸ್ಥಿರತೆ ಅಥವಾ ಬಲ ಇರುವದಿಲ್ಲ. ಜನರು ಸಂಪೂರ್ಣವಾಗಿ ನಿರೀಕ್ಷೆಯನ್ನು ಕಳೆದುಕೊಳ್ಳುವಾಗ, ಜೀವನದ ಬಿರುಗಾಳಿಗಳು ಮುಂದೆ ಸಾಗದಂತೆ ತಡೆಯುವ ಅತ್ಯಧಿಕವಾದ ಶಕ್ತಿಯನ್ನು ಹೊಂದಿರುವದಾಗಿ ತೋರುತ್ತವೆ. ಅವರು ಹತಾಶರಾಗಲು ಪ್ರಾರಂಭಿಸುತ್ತಾರೆ ಮತ್ತು ಸುಲಭವಾಗಿ ಸೋಲೊಪ್ಪಿಕೊಳ್ಳುತ್ತಾರೆ. ಬದುಕಲು ಏನಾದರು ಕಾರಣವಿದೆಯೇ ಎಂದು ಆಶ್ಚರ್ಯದಿಂದ ಯೋಚಿಸಲು ಅವರು ಪ್ರಾರಂಭಿಸುತ್ತಾರೆ. “ನನ್ನ ಬಗ್ಗೆ ಚಿಂತಿಸುವವರು ಯಾರೂ ಇಲ್ಲ,” “ಎಲ್ಲವೂ ತಪ್ಪಾಗಿದೆ” ಮತ್ತು “ಇದೆಲ್ಲಾ ಸರಿಯಾಗುವದೇ ಇಲ್ಲ” ಎಂಬ ಹತಾಶಸ್ಥಿತಿಯ ಆಲೋಚನೆಗಳು ನಮ್ಮ ಮನಸ್ಸುಗಳೊಳಗೆ ಹರಿದು ಬರಲು ಪ್ರಾರಂಭಿಸುತ್ತವೆ. ಈ ಹಂತದಲ್ಲಿ, ಅನೇಕರು ಆತ್ಮಹತ್ಯೆಯ ಬಗ್ಗೆಯೂ ಯೋಚಿಸುತ್ತಾರೆ. ಆದ್ದರಿಂದ, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿಯೂ ನಿರೀಕ್ಷೆಯನ್ನು ಕಳೆದುಕೊಳ್ಳದೆ ಇರುವಂಥದ್ದು ಪ್ರಾಮುಖ್ಯವಾಗಿದೆ. ನಿರೀಕ್ಷೆಯು ಪ್ರಾಣಕ್ಕೆ ಲಂಗರವಾಗಿದೆ.

ನಿರೀಕ್ಷೆಯು ನಂಬಿಕೆಗೆ ಮುನ್ಸೂಚಕವಾಗಿದೆ

ಇಬ್ರಿಯ 11:1

ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ.

ನಿರೀಕ್ಷೆಯು ಪ್ರಾಮುಖ್ಯವಾಗಿದೆ ಯಾಕಂದರೆ ನಂಬಿಕೆಯು ನಿರೀಕ್ಷೆಯ ಮೇಲೆ ಆಧಾರವಾಗಿದೆ. ನಿರೀಕ್ಷೆಯು ನಂಬಿಕೆಗೆ ಮುಂಚೆ ಸಂಭವಿಸುತ್ತದೆ. ನಮಗೆ ನಿರೀಕ್ಷೆ ಇದ್ದಾಗ ಮಾತ್ರವೇ, ನಂಬಿಕೆ ಬರುತ್ತದೆ. ಬಹುಕಾಲದಿಂದ ಅನಾರೋಗ್ಯದಲ್ಲಿರುವ ಒಬ್ಬ ವ್ಯಕ್ತಿಯ ಬಗ್ಗೆ ಆಲೋಚನೆ ಮಾಡಿರಿ, ಆತನಿಗೆ ಸಹಾಯ ಮಾಡಲು ವೈದ್ಯಕೀಯ ವಿಜ್ಞಾನದಲ್ಲಿ ಏನೂ ಉಳಿದಿಲ್ಲ ಮತ್ತು ಆತನು ಕೆಲವು ದಿನಗಳು ಮಾತ್ರವೇ ಬದುಕಿರುತ್ತಾನೆ ಎಂದು ಹೇಳಿರುತ್ತಾರೆ. ಅಂಥ ಪರಿಸ್ಥಿತಿಯಲ್ಲಿ ಬಹುತೇಕ ಜನರು ನಿರೀಕ್ಷೆಯನ್ನೆಲ್ಲಾ ಕಳೆದುಕೊಂಡಿರುವ ಸಾಧ್ಯತೆಯು ಬಹಳವಾಗಿರುತ್ತದೆ. ಅವನ ಕಡೇ ಕ್ಷಣಗಳ, ಕಡೇ ಮಾತುಗಳ ಮತ್ತು ಅಂತಿಮ ಸಂಸ್ಕಾರದ ಚಿತ್ರಗಳು ಅವನ ಮನಸ್ಸಿನಲ್ಲಿ ತುಂಬಿಕೊಂಡಿರುತ್ತವೆ. ಒಬ್ಬ ವ್ಯಕ್ತಿಯು ನಿರೀಕ್ಷೆಯಿಲ್ಲದವನಾಗಿರುವಾಗ, ನಂಬಿಕೆಯು ಸಹ ಕಾರ್ಯಮಾಡಲಾರದು ಯಾಕಂದರೆ “ನಂಬಿಕೆಯು ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದಾಗಿದೆ.” ಒಬ್ಬ ವ್ಯಕ್ತಿ ತಾನು ಸ್ವಸ್ಥವಾಗುವದನ್ನು ನಿರೀಕ್ಷಿಸದೆ ಇದ್ದರೆ, ದೇವರಿಂದ ಸ್ವಸ್ಥತೆಯನ್ನು ಹೊಂದುವ ನಂಬಿಕೆಯುಳ್ಳವನಾಗಿರುವದು ಬಹಳ ಕಷ್ಟವಾಗಿದೆ. ನಿರೀಕ್ಷೆಯು ದೇವರಲ್ಲಿ ನಂಬಿಕೆಯುಳ್ಳವರಾಗಿರುವದಕ್ಕೆ ಪೂರ್ವಾಪೇಕ್ಷಿತವಾಗಿದೆ. ಅನಾರೋಗ್ಯದಲ್ಲಿರುವ ವ್ಯಕ್ತಿ ಕನಿಷ್ಠ ತಾನು ಚೇತರಿಸಿಕೊಳ್ಳುವದನ್ನು ಮತ್ತು ಮರಣದ ಹಾಸಿಗೆಯಿಂದ ಎದ್ದು ಬರುವದನ್ನು ಕಲ್ಪನೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ವೈದ್ಯರು ಅಸಹಾಯಕರಾಗಿರಬಹುದು, ಪರಲೋಕದ ದೇವರು ಗುಣಪಡಿಸುತ್ತಾನೆ ಮತ್ತು ಆತನು ಅದನ್ನು ಮಾಡಲು ಬಯಸುವವನಾಗಿದ್ದಾನೆ ಎಂಬ ನಿರೀಕ್ಷೆಯನ್ನು ಹೊಂದಿರಬೇಕು. ಸಂಪೂರ್ಣವಾದ ಚೇತರಿಕೆಯ ವಿಷಯದಲ್ಲಿ ನಿರೀಕ್ಷೆಯುಳ್ಳವರಾಗಿರುವದು ಸ್ವಸ್ಥತೆಯನ್ನು ಉಂಟುಮಾಡುವಲ್ಲಿ ನಂಬಿಕೆಯು ತನ್ನ ಪಾತ್ರವನ್ನು ನಿರ್ವಹಿಸುವಂತೆ ಮಾಡುತ್ತದೆ.

೪ ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿಗಳನ್ನು ಬದಲಾಯಿಸುವ ದೇವರು

ನಾವಿರುವಂಥ ಪರಿಸ್ಥಿತಿ ಎಂಥದ್ದೇ ಆಗಿರಬಹುದು, ಪರಿಸ್ಥಿತಿಯು ಎಷ್ಟೇ ಹತಾಶವಾಗಿ ತೋರಬಹುದು, ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿಗಳನ್ನು ಬದಲಾಯಿಸುವದರಲ್ಲಿ ಪರಿಣಿತನಾಗಿರುವ ದೇವರು ಇದ್ದಾನೆ ಎಂಬದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆಮೆನ್! ಬಹುಶಃ ನಿಮ್ಮ ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿ ನಿಮ್ಮ ವೈವಾಹಿಕ ಜೀವನವಾಗಿರಬಹುದು, ನಿಮ್ಮ ಉದ್ಯೋಗ, ಮಕ್ಕಳು, ಆರ್ಥಿಕ ಸ್ಥಿತಿ, ವೃತ್ತಿ ಜೀವನ, ವಿದ್ಯಾಭ್ಯಾಸ ಅಥವಾ ಬೇರೆ ಇನ್ನೇನೋ ಆಗಿರಬಹುದು. ಅದು ಎಂಥದ್ದೇ ಆಗಿದ್ದರೂ, ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿಗಳನ್ನು ಬದಲಾಯಿಸುವ ದೇವರನ್ನು ನಾವು ಸೇವಿಸುವವರಾಗಿದ್ದೇವೆ ಎಂಬ ಸತ್ಯದ ಕಡೆಗೆ ಗಮನ ಹರಿಸಿರಿ. ಈ ಕಾರಣದಿಂದಲೇ ನಾವು ನಿರೀಕ್ಷೆಯನ್ನು ಕಳೆದುಕೊಳ್ಳಬಾರದು. ದೇವರು ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿಗಳನ್ನು ಬದಲಾಯಿಸದಂಥ ಕೆಲವು ಚಿರಪರಿಚಿತವಾದ ಉದಾಹರಣೆಗಳನ್ನು ಸತ್ಯವೇದದಿಂದ ನೋಡಿಕೊಳ್ಳೋಣ.

ಬಡ ಮಹಿಳೆ

ತನ್ನನ್ನು, ತನ್ನಿಬ್ಬರು ಗಂಡು ಮಕ್ಕಳನ್ನು ಮತ್ತು ದೊಡ್ಡ ಸಾಲವನ್ನು ಬಿಟ್ಟು ಮೃತಪಟ್ಟ ವ್ಯಕ್ತಿಯ ಹೆಂಡತಿಯ ಬಗ್ಗೆ ಆಲೋಚನೆ ಮಾಡಿರಿ (2 ಅರಸುಗಳು 4:1-7). ಸಾಲಕೊಟ್ಟವರು ಹಣ ಕೇಳಲು ಬಂದರು ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುವದಾಗಿ ಬೆದರಿಸಿದರು. ಆ ಸ್ತ್ರೀಯ ಪರಿಸ್ಥಿತಿ ನಿಜವಾಗಿಯೂ ನಿರೀಕ್ಷೆಯೇ ಇಲ್ಲದ್ದಾಗಿತ್ತು! ಆಕೆ ಎಲೀಷ ಎಂಬ ದೇವರ ಸೇವಕನ ಬಳಿಗೆ ಹೋದಳು, ತನ್ನ ಪರಿಸ್ಥಿತಿಯನ್ನು ವಿವರಿಸಿದಳು ಮತ್ತು ಸಹಾಯ ಕೋರಿದಳು. ಅವನು ಆಕೆಗೆ ನಿನ್ನ ಮನೆಯಲ್ಲಿ ಏನಿದೆ ಎಂದು ಕೇಳಿದನು. ಆಕೆ ಅವನಿಗೆ ಸ್ವಲ್ಪ ಎಣ್ಣೆ ಮಾತ್ರ ಇದೆ ಎಂದು ಉತ್ತರಿಸಿದಳು. ಎಲೀಷನು ಆಕೆಗೆ ನೀನು ಹೋಗಿ ಸಾಧ್ಯವಾದಷ್ಟು ನೆರೆಮನೆಯವರಿಂದ ಬರೀ ಪಾತ್ರೆಗಳನ್ನು ತೆಗೆದುಕೊಂಡು ಬಂದು ಅವುಗಳೊಳಗೆ ಎಣ್ಣೆಯನ್ನು ಹಾಕು ಎಂದು ಸೂಚಿಸಿದನು. ಅದ್ಭುತಕರವಾಗಿ, ಎಣ್ಣೆಯು ಅಧಿಕವಾಯಿತು ಮತ್ತು ಎಲ್ಲಾ ಪಾತ್ರೆಗಳು ತುಂಬಿದವು. ಎಲೀಷನು ನಂತರ ಆಕೆಗೆ ಎಣ್ಣೆಯನು ಮಾರು, ಸಾಲವನ್ನು ತೀರಿಸು ಮತ್ತು ಹೊಸದಾಗಿ ನಿನ್ನ ಜೀವನವನ್ನು ಪ್ರಾರಂಭಿಸು ಎಂದು ಸೂಚಿಸಿದನು. ದೇವರು ಆ ಸ್ತ್ರೀಯ ಅವಶ್ಯಕತೆಯನ್ನು ಅದ್ಭುತವಾಗಿ ಪೂರೈಸುವ ಮೂಲಕ ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿಯನ್ನು ಬದಲಾಯಿಸಿದನು.

ಮದುವೆ ಮನೆಯಲ್ಲಿ ನಡೆದ ಅದ್ಭುತಕಾರ್ಯ

ಮದುವೆಯ ಔತಣದ ಪಾರುಪತ್ಯಗಾರನ ಮನೆಯಲ್ಲಿ ದ್ರಾಕ್ಷಾರಸ ಮುಗಿದು ಹೋಯಿತು—ಇದು ಕೊರತೆಯ ಸಾಧಾರಣ ಪರಿಸ್ಥಿತಿಯಾಗಿತ್ತಾದರೂ ಎಲ್ಲಾ ರೀತಿಯಲ್ಲಿಯೂ ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿಯಾಗಿತ್ತು. ಏನು ಮಾಡಬೇಕೆಂದು ಅವರು ಚಿಂತಿಸುತ್ತಿದ್ದಾಗ, ಯೇಸುವಿನ ತಾಯಿಯಾದ, ಮರಿಯಳು ಯೇಸು ಕ್ರಿಸ್ತನು ನಿಮಗೆ ಹೇಳುವದನ್ನು ಮಾಡಿರಿ ಎಂದು ಮದುವೆಯ ಮನೆಯಲ್ಲಿದ್ದ ಸೇವಕರಿಗೆ ಹೇಳಿದಳು. ಯೇಸು ಕ್ರಿಸ್ತನು ಅವರಿಗೆ ನೀರಿನ ಬಾನೆಗಳಿಗೆ ನೀರು ತುಂಬಿಸಿರಿ ಮತ್ತು ಅದನ್ನು ಅತಿಥಿಗಳಿಗೆ ಕೊಡಿರಿ ಎಂದು ಸೂಚಿಸಿದನು. ನೀರು ಅಸಾಧಾರಣವಾದ ರೀತಿಯಲ್ಲಿ ದ್ರಾಕ್ಷಾರಸವಾಗಿ ಮಾರ್ಪಟ್ಟಿತು ಮತ್ತು ಮದುವೆ ಮನೆಯಲ್ಲಿ ಎಲ್ಲರೂ ಬೇಕಾದಷ್ಟು ಸೇವಿಸಿದರು (ಯೋಹಾನ 2:1-11). ಅದ್ಭುತವಾದ ಒದಗಿಸುವಿಕೆಯ ಮತ್ತೊಂದು ಘಟನೆ! ಕರ್ತನ ಆಲೋಚನೆಗಳನ್ನು ಕೇಳಿ ಅದರಂತೆ ನಡೆದುಕೊಳ್ಳುವದು ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿಯನ್ನು ಬದಲಾಯಿಸುತ್ತದೆ.

ನಿರೀಕ್ಷೆಯಿಲ್ಲದ ಹತಾಶೆಯ ರಾತ್ರಿಯ ನಂತರದ ಮುಂಜಾನೆ

ಯೇಸು ಕ್ರಿಸ್ತನು ವ್ಯವಹಾರ ಸಂಬಂಧವಾಗಿ ಮಾಡಿದ ಅದ್ಭುತಕಾರ್ಯವನ್ನು ಲೂಕ 5ರಲ್ಲಿ ಬರೆಯಲಾಗಿದೆ. ಪೇತ್ರನು ತನ್ನ “ವ್ಯವಹಾರ ಜೊತೆಗಾರರಾದ”—ಯಾಕೋಬ, ಯೋಹಾನ ಮತ್ತು ಆಂದ್ರೇಯನೊಂದಿಗೆ—ಮೀನು ಮಾರುತ್ತಿದ್ದನು. ಅವರು ಮೀನುಗಾರರಾಗಿದ್ದರು. ಒಮ್ಮೆ, ಅವರು ಇಡೀ ರಾತ್ರಿ ಮೀನು ಹಿಡಿಯಲು ಪ್ರಯತ್ನಿಸಿದರೂ ಒಂದು ಮೀನೂ ಅವರಿಗೆ ಸಿಗಲಿಲ್ಲ. ಮಾರಣೆಯ ದಿನ ಮುಂಜಾನೆ, ಅವರು ಹಿಂದಿರುಗುತ್ತಿದ್ದಾಗ, ಕರ್ತನಾದ ಯೇಸು ಕ್ರಿಸ್ತನು ಅವರನ್ನು ಭೇಟಿಯಾದನು. ಆತನ ಉಪದೇಶವನ್ನು ಕೇಳಿಸಿಕೊಳ್ಳಲು ಸೇರಿಬಂದಿದ್ದ ಜನರಿಗೆ ಉಪದೇಶ ಮಾಡಲು ಅವರ ದೋಣಿಯನ್ನು ಉಪಯೋಗಿಸಿಕೊಳ್ಳುವದಾಗಿ ಅವರನ್ನು ಕೇಳಿಕೊಂಡನು. ವಾಕ್ಯ ಉಪದೇಶದ ನಂತರ, ಕರ್ತನು ಪೇತ್ರನಿಗೆ ಮತ್ತೊಮ್ಮೆ ಸಮುದ್ರಕ್ಕೆ ಹೋಗು ಮತ್ತು ದೊಡ್ಡ ಸಂಖ್ಯೆಯಲ್ಲಿ ಮೀನು ಹಿಡಿಯಲು ಬಲೆ ಹಾಕು ಎಂಬದಾಗಿ ಹೇಳಿದನು. ಅದಕ್ಕೆ ಪೇತ್ರನು, “ಗುರುವೇ, ನಾವು ರಾತಿರೆಯ್ಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ, ಆದರೆ ನಿನ್ನ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ” ಎಂದು ಹೇಳಿದನು (ಲೂಕ 5:5).

ಕರ್ತನ ಒಂದು ಮಾತು ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿಯನ್ನು ಬದಲಾಯಿಸಿತು. ಯೇಸು ಕ್ರಿಸ್ತನು ಹೇಳಿದ್ದಕ್ಕೆ ಪೇತ್ರನು ಕೂಡಲೇ ವಿಧೇಯನಾದದ್ದು “ಆರ್ಥಿಕ ಅದ್ಭುತವನ್ನು” ಅನುಭವಿಸುವಂತೆ ಮಾಡಿತು.

ಇಸ್ರಾಯೇಲ್ ದೇಶ

ಇಸ್ರಾಯೇಲ್ ಜನರು ಇಡೀ ಲೋಕದಾದ್ಯಂತ ದಿಕ್ಕಾಪಾಲಾಗಿ ಚದುರಿಹೋಗಿದ್ದರು. ನಿರೀಕ್ಷೆಯೇ ಇಲ್ಲದ ಹತಾಶ ಸ್ಥಿತಿ ಯೆಹೂದ್ಯರನ್ನು ಆವರಿಸಿಕೊಂಡಿತ್ತು. ಯೆಹೆಜ್ಕೇಲ 37ರಲ್ಲಿ, ಇಸ್ರಾಯೇಲ್ ಜನರ ಪರಿಸ್ಥಿತಿಯನ್ನು ವಿವರಿಸಲು ದೇವರು ಯೆಹೆಜ್ಕೇಲನಿಗೆ ಒಣಗಿದ ಎಲುಬುಗಳ ಒಂದು ಕಣಿವೆಯನ್ನು ತೋರಿಸಿದನು. “ನರಪುತ್ರನೇ, ಈ ಎಲುಬುಗಳು ಇಸ್ರಾಯೇಲಿನ ಪೂರ್ವವಂಶವು; ಇಗೋ, ಆ ವಂಶೀಯರು – ಅಯ್ಯೋ, ನಮ್ಮ ಎಲುಬುಗಳು ಒಣಗಿಹೋದವು, ನಮ್ಮ ನಿರೀಕ್ಷೆಯು ಹಾಳಾಯಿತು; ನಾವು ಬುಡನಾಶವಾದೆವು ಅಂದುಕೊಳ್ಳುತ್ತಿದ್ದಾರೆ” (ಯೆಹೆಜ್ಕೇಲ 37:11).

ನಂತರ ದೇವರು ಯೆಹೆಜ್ಕೇಲನಿಗೆ ಒಣಗಿದ ಎಲುಬುಗಳಿಗೆ ಪ್ರವಾದಿಸುವಂತೆ ಸೂಚಿಸಿದನು. “ಆದಕಾರಣ ನೀನು ಈ ದೈವೋಕ್ತಿಯನ್ನು ಅವರಿಗೆ ನುಡಿ – ಕರ್ತನಾದ ಯೆಹೋವನು ಇಂತೆನ್ನುತ್ತಾನೆ – ನನ್ನ ಜನರೇ, ನೋಡಿರಿ, ನಾನು ನಿಮ್ಮ ಗೋರಿಗಳನ್ನು ತೆರೆದು ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ ಇಸ್ರಾಯೇಲ್ ದೇಶಕ್ಕೆ ಸೇರ ಮಾಡುವೆನು” (ಯೆಹೆಜ್ಕೇಲ 37:12). ಪ್ರವಾದಿಯ ಮೂಲಕ, ದೇವರು ಇಸ್ರಾಯೇಲ್ ಜನರು ಮತ್ತೆ ಒಟ್ಟುಗೂಡುವದನ್ನು ಮತ್ತು ಇಸ್ರಾಯೇಲ್ ದೇಶ ಪುನರ್ ಸ್ಥಾಪನೆಯಾಗುವದನ್ನು ಮುಂಚಿತವಾಗಿ ತಿಳಿಸಿದನು. ದೇವರು ತನ್ನ ಮಾತನ್ನು ನೆರವೇರಿಸಿದನು, ಮತ್ತು 1948ರ, ಮೇ 14ರಂದು, ಇಸ್ರಾಯೇಲನ್ನು ದೇಶವಾಗಿ ಘೋಷಿಸಲಾಯಿತು.

ದೇವರು “ಗೋರಿಗಳನ್ನು” ತೆರೆಯಲು ಮತ್ತು ಪರಿಸ್ಥಿತಿಗಳನ್ನು ಬದಲಾಯಿಸಲು ಶಕ್ತನಾಗಿದ್ದಾನೆ! ದೇವರಿಗೆ ನಿರೀಕ್ಷೆಯಿಲ್ಲದೆ ಹತಾಶವಾಗಿರುವಂಥದ್ದು ಏನೂ ಇಲ್ಲ.

ಅಬ್ರಹಾಮನು ಮತ್ತು ಸಾರಳು

ಅಬ್ರಹಾಮ ಮತ್ತು ಸಾರಳಿಗೆ ಕರ್ತನು ನಿಮಗೆ ಸ್ವಂತವಾಗಿ ಒಬ್ಬ ಮಗನನ್ನು ಕೊಡುವೆನು ಎಂಬ ವಾಗ್ದಾನವನ್ನು ಮಾಡಿದಾಗ ಅವರು ಮುಪ್ಪಿನ ವಯಸ್ಸಿನವರಾಗಿದ್ದರು. ಆತನು ಅವರಿಗೆ ಒಬ್ಬ ಮಗನನ್ನು ವಾಗ್ದಾನ ಮಾಡಿದನು ಮತ್ತು ಆ ಮಗನ ಮೂಲಕ, ಅವರು ಆಕಾಶದಲ್ಲಿರುವ ಅಸಂಖ್ಯವಾದ ನಕ್ಷತ್ರದಷ್ಟು ಮತ್ತು ಸಮುದ್ರದ ಉಸುಬಿನಷ್ಟು ಸಂತತಿಯನ್ನು ಹೊಂದುವದಾಗಿ ಹೇಳಿದನು.

ರೋಮಾಪುರದವರಿಗೆ 4:17,18

17 ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲ ಪಿತೃವಾಗಿ ನೇಮಿಸಿದ್ದೇನೆಂದು ಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಅಬ್ರಹಾಮನು ನಮ್ಮೆಲ್ಲರಿಗೂ ದೇವರ ಸನ್ನಿಧಿಯಲ್ಲಿ ಮೂಲ ಪಿತೃವಾಗಿದ್ದಾನೆ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲದ್ದನ್ನು ಇರುವದಾಗಿ ಕರೆಯುವವನಾಗಿಯೂ ಇದ್ದಾನೆಂದು ಅಬ್ರಹಾಮನು ನಂಬಿದನು.
18 ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವದು ಎಂಬದಾಗಿತನಗೆ ಹೇಳಲ್ಪಟ್ಟ ಮಾತು ನೆರವೇರುವದಕ್ಕೆ ಮಾರ್ಗ ತೋರದೆ ಇರುವದರಿಂದ ಅಬ್ರಹಾಮನು ತಾನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ನಿರೀಕ್ಷಿಸಿ ನಂಬಿದನು.

ಇದು ನಾವು ಅನುಸರಿಸಬೇಕಾದ ಮಾದರಿಯಾಗಿದೆ. ಅಬ್ರಹಾಮನು “ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ, ನಿರೀಕ್ಷೆಯಿಂದ ನಂಬಿದನು.” ನಿರೀಕ್ಷಿಸಲು ಕಾರಣವೇ ಇಲ್ಲದಿರುವಾಗಲೂ, ಅಬ್ರಹಾಮನು ದೇವರು ಹೇಳಿದ ಮಾತಿನ ಮೇರೆಗೆ ನಿರೀಕ್ಷಿಸಿ ನಂಬಿದನು.

ಅಬ್ರಹಾಮ ಮತ್ತು ಸಾರಳಿಗೆ ಕರ್ತನು ನಿಮಗೆ ಸ್ವಂತವಾಗಿ ಒಬ್ಬ ಮಗನನ್ನು ಕೊಡುವೆನು ಎಂಬ ವಾಗ್ದಾನವನ್ನು ಮಾಡಿದಾಗ ಅವರು ಮುಪ್ಪಿನ ವಯಸ್ಸಿನವರಾಗಿದ್ದರು. ಆತನು ಅವರಿಗೆ ಒಬ್ಬ ಮಗನನ್ನು ವಾಗ್ದಾನ ಮಾಡಿದನು ಮತ್ತು ಆ ಮಗನ ಮೂಲಕ, ಅವರು ಆಕಾಶದಲ್ಲಿರುವ ಅಸಂಖ್ಯವಾದ ನಕ್ಷತ್ರದಷ್ಟು ಮತ್ತು ಸಮುದ್ರದ ಉಸುಬಿನಷ್ಟು ಸಂತತಿಯನ್ನು ಹೊಂದುವದಾಗಿ ಹೇಳಿದನು. ಮಗುವನ್ನು ಪಡೆಯುವಿರಿ ಎಂಬದಾಗಿ ಹೇಳಲಾದ ಸಮಯದಲ್ಲಿ ಅವರು ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿಯಲ್ಲಿದ್ದರು ಯಾಕಂದರೆ ಬಹಳಷ್ಟು ವರ್ಷಗಳಿಂದ ಅವರಿಗೆ ಮಕ್ಕಳೇ ಇರಲಿಲ್ಲ. ಅಬ್ರಹಾಮನಿಗೆ 99 ವರ್ಷ ವಯಸ್ಸಾಗಿತ್ತು ಮತ್ತು ಸಾರಳ ಗರ್ಭವು ಬಹಳ ವರ್ಷಗಳಿಂದ ಬಂಜೆಯಾಗಿತ್ತು-ಅದೊಂದು ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿಯಾಗಿತ್ತು.

೫ ನಿರೀಕ್ಷೆಯಿಲ್ಲದ ಪರಿಸ್ಥಿತಿಯಲ್ಲಿಯೂ ನಿರೀಕ್ಷೆಯುಳ್ಳವರಾಗಿರುವದಕ್ಕೆ ಆಧಾರ

ನಿರೀಕ್ಷೆಯಿಲ್ಲದ ಪರಿಸ್ಥಿತಿಯಲ್ಲಿಯೂ ನಿರೀಕ್ಷೆಯುಳ್ಳವರಾಗಿರುವದಕ್ಕೆ ಏನು ಆಧಾರ? ಇದು ಕೇವಲ ಕಲ್ಪನೆಯಾಗಿದೆಯೇ? ಇದು ವಿಷಯಕ್ಕಿಂತ ಹೆಚ್ಚಿನ ಮನಸ್ಸಿನ ಪ್ರಶ್ನೆಯಾಗಿದೆಯೇ? ಇದು ಸಕಾರಾತ್ಮಕರಾಗಿ ಇರುವ-ಸಕಾರಾತ್ಮಕರಾಗಿರುವ ಮತ್ತು ಸಕಾರಾತ್ಮಕತೆಯನ್ನು ತೋರಲು ಪ್ರಯತ್ನಿಸುವ ಮಾನವ ವಿಧಾನವಾಗಿದೆಯೇ? ಅತ್ಯಂತ ಕಷ್ಟಕರವಾದ ಪರಿಸ್ಥಿತಿಗಳಲ್ಲಿಯೂ ನಾವು ನಿರೀಕ್ಷೆಯುಳ್ಳವರಾಗಿರಬಹುದು ಎಂಬದಕ್ಕೆ ಕಾರಣ ಏನೆಂದರೆ ದೇವರು ಮತ್ತು ಆತನ ವಾಕ್ಯವಾಗಿದೆ.

ರೋಮಾಪುರದವರಿಗೆ 4:18

ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವದು ಎಂಬದಾಗಿತನಗೆ ಹೇಳಲ್ಪಟ್ಟ ಮಾತು ನೆರವೇರುವದಕ್ಕೆ ಮಾರ್ಗ ತೋರದೆ ಇರುವದರಿಂದ ಅಬ್ರಹಾಮನು ತಾನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ನಿರೀಕ್ಷಿಸಿ ನಂಬಿದನು.

ನಂಬಲು ಯಾವುದೇ ಕಾರಣವಿಲ್ಲದಿದ್ದರೂ ಅಬ್ರಹಾಮನು ದೇವರು ಮಾಡಿದ ವಾಗ್ದಾನವನ್ನು ನಂಬಿದನು. ಪರಿಸ್ಥಿತಿಯು ನಿರೀಕ್ಷೆಯಿಲ್ಲದೆ ಇರುವಂಥದ್ದಾಗಿದ್ದರೂ, ಅವನು ನಂಬಿದನು. ಯಾಕೆ? ಯಾಕಂದರೆ ದೇವರೇ ಹೇಳಿದ್ದನು! ಅವನು “ಹೇಳಲಾಗಿದ್ದ ಪ್ರಕಾರವೇ” ನಿರೀಕ್ಷೆಯಿಂದ ನಂಬಿದನು. ಅದುವೇ ಅವನ ನಿರೀಕ್ಷೆಗೆ ಆಧಾರವಾಗಿತ್ತು. ದೇವರು ಹೇಳಿದ್ದನು, ಮತ್ತು ಪರಿಸ್ಥಿತಿ ನಿರೀಕ್ಷೆಯಿಲ್ಲದ್ದಾಗಿದ್ದರೂ, ಅಬ್ರಹಾಮನು ಎಲ್ಲಾ ನಿರೀಕ್ಷೆಗೆ ವಿರುದ್ಧವಾಗಿ ನಂಬುವ ಆಯ್ಕೆ ಮಾಡಿಕೊಂಡನು.

ದೇವರು ಮತ್ತು ಆತನ ವಾಕ್ಯ ನಮಗಿರುವ ನಿರೀಕ್ಷೆಗೆ ಆಧಾರವಾಗುತ್ತವೆ

ಕೀರ್ತನೆಗಳು 38:15

ಯೆಹೋವನೇ ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ; ನನ್ನ ಕರ್ತನೇ, ನನ್ನ ದೇವರೇ, ನೀನೇ ಸದುತ್ತರವನ್ನು ಕೊಡುವವನು.

ಕೀರ್ತನೆಗಳು 130:5

ನಾನು ಯೆಹೋವನನ್ನು ಎದುರುನೋಡುತ್ತೇನೆ, ನನ್ನ ಪ್ರಾಣವು ಆತನನ್ನು ಕಾದುಕೊಂಡಿದೆ; ಆತನ ನುಡಿಯನ್ನು ನಿರೀಕ್ಷಿಸಿಕೊಂಡಿದ್ದೇನೆ.

ರೋಮಾಪುರದವರಿಗೆ 15:4

ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.

ದೇವರೇ ನಮ್ಮ ನಿರೀಕ್ಷೆಗೆ ಕಾರಣ, ಮೂಲ ಮತ್ತು ಬಲವಾಗಿದ್ದಾನೆ. ಆತನ ವಾಕ್ಯವು ನಮ್ಮ ನಿರೀಕ್ಷೆಗೆ ಆಧಾರವಾಗುತ್ತದೆ. ಶಾಸ್ತ್ರಗಳಿಂದ ನಮ್ಮ ಹೃದಯದಲ್ಲಿ ಉಂಟಾಗುವ ಸ್ಥಿರಚಿತ್ತ ಮತ್ತು ಆದರಣೆಯಿಂದ ನಾವು ನಿರೀಕ್ಷೆಯನ್ನು ಕಾಪಾಡಿಕೊಳ್ಳುತ್ತೇವೆ.

ಭವಿಷ್ಯದ ನಿರೀಕ್ಷೆ

ಇಲ್ಲಿಯ ತನಕ ನಾವು ಓದಿರುವ ಎಲ್ಲವುಗಳ ಪ್ರಾಯೋಗಿಕ ಕಡೆಯನ್ನೂ ನೋಡಿಕೊಳ್ಳೋಣ. ಇದನ್ನು ಓದುತ್ತಿರುವ ನಿಮ್ಮಲ್ಲಿ ಕೆಲವರು, “ಭವಿಷ್ಯದ ಬಗ್ಗೆ ನನಗೆ ಯಾವುದೇ ನಿರೀಕ್ಷೆಯಿಲ್ಲ” ಅಥವಾ “ನಾನು ಬಹಳ ದೂರ ಹೋಗುತ್ತೇನೆ ಎಂದು ನನಗೆ ಅನ್ನಿಸುವದಿಲ್ಲ. ನನ್ನ ಜೀವನದಲ್ಲಿ ಹೆಚ್ಚಿನದಾಗಿ ಏನೂ ಆಗುವದಿಲ್ಲ” ಎಂದು ಹೇಳುತ್ತಿರಬಹುದು. ದೇವರು ಮತ್ತು ಆತನ ವಾಕ್ಯದ ನಿಮಿತ್ತ, ಭವಿಷ್ಯದ ವಿಷಯದಲ್ಲಿ ನಾವು ನಿರೀಕ್ಷೆಯುಳ್ಳವರಾಗಿ ಇರಬಹುದು ಎಂದು ನೀವು ತಿಳಿದುಕೊಳ್ಳಬೇಕೆಂಬದಾಗಿ ನಾನು ಬಯಸುತ್ತೇನೆ. ಆತನ ವಾಕ್ಯವು ಹೇಳುವದೇನೆಂದರೆ,

1 ಕೊರಿಂಥದವರಿಗೆ 2:9

ಆದರೆ ಬರೆದಿರುವ ಪ್ರಕಾರ – “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.”

ಭವಿಷ್ಯದ ವಿಷಯವಾಗಿ ನಮಗೆ ನಿರೀಕ್ಷೆ ಇದೆ. ಭವಿಷ್ಯದಲ್ಲಿ ನಾವು ಕೆಲವು ಅದ್ಭುತವಾದ ಕಾರ್ಯಗಳನ್ನು ನೋಡುತ್ತೇವೆ ಎಂಬ ನಿರೀಕ್ಷೆ ನಮಗೆ ಇದೆ. ಯಾಕೆ? ಯಾಕೆಂದರೆ ಬರೆದಿರುವ ದೇವರ ವಾಕ್ಯವು ಹೇಳುವದೇನೆಂದರೆ ದೇವರು ತನ್ನನ್ನು ಪ್ರೀತಿಸುವವರಿಗಾಗಿ ಈ ಕಾರ್ಯಗಳನ್ನು ಸಿದ್ಧಮಾಡಿದ್ದಾನೆ.

ಯೆರೆಮಿಯ 29:11

ಇವರಿಗೆ ಗತಿಯಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ. [ನಿಮಗೆ ಭವಿಷ್ಯವನ್ನೂ ನಿರೀಕ್ಷೆಯನ್ನೂ ಕೊಡುತ್ತವೆ.

ಇದುವೇ-ದೇವರ ವಾಕ್ಯವೇ ನಮ್ಮ ನಿರೀಕ್ಷೆಗೆ ಆಧಾರವಾಗಿದೆ. ಆದ್ದರಿಂದ, ನಾವು ಉತ್ತಮ ಭವಿಷ್ಯಕ್ಕಾಗಿ ನಿರೀಕ್ಷಿಸುತ್ತಾ ಇರಬಹುದು. ನಮ್ಮ ಸದ್ಯದ ಪರಿಸ್ಥಿತಿಯು ನಮ್ಮ ಅಂತಿಮವಾದ ಗಮ್ಯಸ್ಥಾನಕ್ಕೆ ಸೂಚನೆಯಲ್ಲ. ನಮ್ಮ ಭವಿಷ್ಯವು ಬಲಿಷ್ಠವಾಗಿರುತ್ತದೆ, ಯಶಸ್ವಿಯಾಗಿರುತ್ತದೆ ಮತ್ತು ಭಧ್ರವಾಗಿರುತ್ತದೆ ಎಂಬ ನಿರೀಕ್ಷೆ ನಮಗಿದೆ ಯಾಕಂದರೆ ಆತನು ತನ್ನ ವಾಕ್ಯದಲ್ಲಿ ವಾಗ್ದಾನಗಳನ್ನು ಮಾಡಿದ್ದಾನೆ. ನಮ್ಮ ಸದ್ಯದ ಪರಿಸ್ಥಿತಿಗಳು ನಮ್ಮನ್ನು ಕುಗ್ಗಿಸಲು ನಾವು ಅನುಮತಿಸುವದಿಲ್ಲ.

ಯಶಸ್ವಿಯಾಗುವ ನಿರೀಕ್ಷೆ

ನಿಮ್ಮಲ್ಲಿ ಕೆಲವರಿಗೆ ನಕಾರಾತ್ಮಕವಾದ ಆಲೋಚನೆಗಳಿರಬಹುದು ಮತ್ತು ಒಂದುವೇಳೆ ನೀವು ಜೀವನದಲ್ಲಿ ಎಂದಾದರು ಯಶಸ್ವಿಯಾಗುವಿರೋ ಎಂಬ ಚಿಂತೆ ಕಾಡುತ್ತಿರಬಹುದು. ನೀವು ಕೈಹಾಕಿರುವ ಪ್ರತಿಯೊಂದು ಕಾರ್ಯವೂ ವಿಫಲವಾಗಿರಬಹುದು ಮತ್ತು ಇಲ್ಲಿಯ ತನಕ ನೀವು ಯಾವುದರಲ್ಲಿಯೂ ಯಶಸನ್ನುಗಳಿಸಲು ಆಗದೆ ಇರಬಹುದು. ನೀವು ದೇವರ ವಾಕ್ಯ ಹೇಳುವದನ್ನು ನಂಬುವವರಾಗಿರಬೇಕು.

ಕೀರ್ತನೆಗಳು 1:1-3

1ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ
ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ
ಧರ್ಮನಿಂದಕರೊಡನೆ ಕೂತುಕೊಳ್ಳದೆ
2ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ
ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ
ಅವನು ಎಷ್ಟೋ ಧನ್ಯನು.
3ಅವನು ನೀರಿನ ಕಾಲಿವೆಗಳ ಬಳಿಯಲ್ಲಿ
ಬೆಳೆದಿರುವ ಮರದ ಹಾಗಿರುವನು.
ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ;
ಅದರ ಎಲೆ ಬಾಡುವದೇ ಇಲ್ಲ.
ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.

ನಿಮ್ಮನ್ನು ನೀವು ಫಲಭರಿತವಾದ ಮರದ ಹಾಗೆ ಚಿತ್ರಿಸಿಕೊಳ್ಳಿರಿ. ನೀವು ಮಾಡುವ ಕಾರ್ಯಗಳೆಲ್ಲವುಗಳಲ್ಲಿ ಸಫಲವಾಗುವ ವ್ಯಕ್ತಿಯ ಹಾಗೆ ನಿಮ್ಮನ್ನು ನೋಡಿಕೊಳ್ಳಿರಿ. ಇದು ನಿಮ್ಮ ಜೀವಿತದ ಕುರಿತಾಗಿರುವ ದೇವರ ವಾಕ್ಯವಾಗಿದೆ ಮತ್ತು ಯಾವುದೇ ಪರಿಸ್ಥಿತಿಯು ದೇವರಿಗಾಗಿ ನೀವು ಮಾಡಬಹುದಾದ ಕಾರ್ಯಗಳನ್ನು ಕದ್ದುಕೊಳ್ಳಲು ಅವಕಾಶ ಕೊಡಬೇಡಿರಿ.

ನಿಮ್ಮ ಕನಸುಗಳನ್ನು ನೆರವೇರಿಸಿಕೊಳ್ಳುವ ನಿರೀಕ್ಷೆ

ನಿಮ್ಮಲ್ಲಿ ಕೆಲವರು ನಿಮ್ಮ ಕನಸುಗಳನ್ನು ನೆರವೇರಿಸಿಕೊಳ್ಳುವ ಎಲ್ಲಾ ನಿರೀಕ್ಷೆಯನ್ನು ಬಿಟ್ಟಿರಬಹುದು. ದೇವರ ವಾಕ್ಯ ಹೇಳುವದೇನೆಂದರೆ,

ಕೀರ್ತನೆಗಳು 37:4

ಆಗ ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.

ನಾನು ಎಂದಿಗೂ ನನ್ನ ಕನಸುಗಳನ್ನು ತಲುಪಲು ಆಗುವದೇ ಇಲ್ಲವೇನೋ ಎಂಬದಾಗಿ ಅನ್ನಿಸುವಂಥ ಪರಿಸ್ಥಿತಿಗಳನ್ನು ನೋಡಿದ್ದೇನೆ. ನಾನು ಬೆಳೆಯುತ್ತಿದ್ದ ಸಮಯದಲ್ಲಿ, ಲೋಕದ ರಾಷ್ಟ್ರಗಳ ಮೇಲೆ ಪ್ರಭಾವ ಬೀರುವಂಥ ಬಲಿಷ್ಠವಾದ ಸಭೆಯನ್ನು ಬೆಂಗಳೂರು ಪಟ್ಟಣದಲ್ಲಿ ಸ್ಥಾಪಿಸಬೇಕೆಂಬ ಕನಸು ಕಾಣುತ್ತಿದ್ದದ್ದು ಈಗಲೂ ನನಗೆ ನೆನಪಿದೆ. ವಿವಿಧ ಘಟನೆಗಳು ಸಂಭವಿಸಿದವು ಮತ್ತು ನನ್ನ ಕನಸನ್ನು ನೆರವೇರಿಸಿಕೊಳ್ಳಲು ಅಗುವದೇ ಇಲ್ಲ ಎಂಬದಾಗಿ ಯೋಚಿಸುವಂಥ ಅನೇಕ ಪರಿಸ್ಥಿತಿಗಳಲ್ಲಿ ನಾನು ಸಿಕ್ಕಿಕೊಂಡೆನು. ಅದು ಕೇವಲ ಕನಸಾಗಿಯೇ ಉಳಿಯುವುದೇನೋ ಎಂಬದಾಗಿ ಅನ್ನಿಸುತ್ತಾ ಇತ್ತು. ನಾನು ಎಂದಿಗೂ ಆ ಹಂತಕ್ಕೆ ಬರಲು ಆಗುವದೇ ಇಲ್ಲವೇನೋ ಎಂಬದಾಗಿ ಅನ್ನಿಸುತ್ತಾ ಇತ್ತು. ಆದರೂ, ನಾನು ನನ್ನ ನಿರೀಕ್ಷೆಯನ್ನು ಜೀವಂತವಾಗಿಟ್ಟುಕೊಂಡಿದ್ದೆನು ಯಾಕಂದರೆ ಆತನ ವಾಕ್ಯ ಹೇಳುವದೇನೆಂದರೆ ಆತನು ನನಗೆ “ಭವಿಷ್ಯ ಹಾಗೂ ನಿರೀಕ್ಷೆಯನ್ನು ಕೊಡುತ್ತಾನೆ,” ಹಾಗೂ “ಕಣ್ಣು ಕಾಣದ, ಕಿವಿಯು ಕೇಳದ” ಕಾರ್ಯಗಳನ್ನು ಸಿದ್ಧಮಾಡಿದ್ದಾನೆ. ಇದಲ್ಲದೆ ಆತನ ವಾಕ್ಯವು ಹೇಳುವದೇನೆಂದರೆ ಒಂದುವೇಳೆ ನಾನು ಆತನಲ್ಲಿ ಸಂತೋಷಿಸಿದರೆ, ಆತನು ನನ್ನ ಇಷ್ಟಾರ್ಥಗಳನ್ನೆಲ್ಲಾ ನೆರವೇರಿಸುವನು. ನನ್ನ ಪರಿಸ್ಥಿತಿ ಹದಗೆಡುತ್ತಿರುವಂತೆ ಅನ್ನಿಸಿದರೂ ಆತನ ವಾಕ್ಯ ಬದಲಾಗದೆ ಇತ್ತು. ನಾನು ಆತನ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಂಡೆನು. ಆತನ ವಾಕ್ಯವು ನನ್ನ ನಿರೀಕ್ಷೆಗೆ ಆಧಾರವಾಯಿತು. ಮತ್ತು ಈಗ, ಆ ಕನಸು ನನಸಾಗುತ್ತಿರುವದನ್ನು ನೋಡುತ್ತಾ ಇದ್ದೇನೆ. ಹಲ್ಲೆಲೂಯಾ!

ನಿಮ್ಮ ಮಕ್ಕಳಿಗಾಗಿ ನಿರೀಕ್ಷೆ

ನಿಮ್ಮಲ್ಲಿ ಕೆಲವರು ನಿಮ್ಮ ಮಕ್ಕಳ ವಿಷಯವಾಗಿ ನಿರೀಕ್ಷೆಯನ್ನು ಕಳೆದುಕೊಳ್ಳುತ್ತಾ ಇರಬಹುದು. ನೀವು ಅವರಿಗೆ ಚೆನ್ನಾಗಿ ತರಬೇತಿ ಕೊಟ್ಟಿರಬಹುದು ಮತ್ತು ದೇವರ ವಾಕ್ಯವನ್ನು ಕಲಿಸಿರಬಹುದು, ಆದರೆ ಈಗ, ಅವರು ತಮ್ಮ ಜೀವಿತದಲ್ಲಿ ಇಂಥ ಕಾರ್ಯಗಳಿಗೆ ಒಳಗಾಗುತ್ತಾರೆ ಎಂಬದಾಗಿ ನೀವು ಎಂದಿಗೂ ಊಹಿಸಿಕೊಳ್ಳದೆ ಇರುವಂಥ ಕಾರ್ಯಗಳಿಗೆ ಒಳಗಾಗಿರುವಂಥ ಹಂತದಲ್ಲಿರಬಹುದು. ಬಹುಶಃ ಅವರು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿರಬಹುದು, ಅಥವಾ ಮದ್ಯಪಾನ ಮತ್ತು ಮಾದಕ ಪದಾರ್ಥಗಳ ಸೇವನೆಗೆ ಒಳಗಾಗಿರಬಹುದು. ನೀವು ಕೊಟ್ಟ ತರಬೇತಿ ಎಲ್ಲವೂ ವ್ಯರ್ಥವಾದಂತೆ ಅನ್ನಿಸಬಹುದು. ಅವರಿಗಾಗಿ ನೀವು ಕಷ್ಟಪಟ್ಟ ವರ್ಷಗಳೆಲ್ಲವೂ ವ್ಯರ್ಥವಾಯಿತಲ್ಲಾ ಎಂದು ನೀವು ಯೋಚಿಸುತ್ತಿರಬಹುದು. ನಿಮ್ಮ ಮಕ್ಕಳ ವಿಷಯದಲ್ಲಿ ನಿರೀಕ್ಷೆಯನ್ನು ಕಳೆದುಕೊಳ್ಳುವ ಹಂತದಲ್ಲಿ ನೀವು ಇದ್ದಿರಬಹುದು. ನಾನು ನಿಮ್ಮನ್ನು ಪ್ರೋತ್ಸಾಹಪಡಿಸುತ್ತಾ ನಿಮಗೆ ಹೇಳಲು ಬಯಸುವದೇನೆಂದರೆ, “ನಿರೀಕ್ಷೆಯನ್ನು ಕಳೆದುಕೊಳ್ಳಬೇಡಿರಿ.” ದೇವರ ವಾಕ್ಯವು ಹೇಳುವದೇನೆಂದರೆ,

ಕೀರ್ತನೆಗಳು 112:1,2

1 ಯಾಹುವಿಗೆ ಸ್ತೋತ್ರ! ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು.
2 ಅವನ ಸಂತಾನವು ಲೋಕದಲ್ಲಿ ಬಲಿಷ್ಠವಾಗುವದು; ನೀತಿವಂತನ ವಂಶವು ಶುಭಹೊಂದುವದು.

“ನಾನು ನಿನ್ನ ವಾಕ್ಯದಲ್ಲಿ ನಿರೀಕ್ಷೆಯುಳ್ಳವನಾಗಿದ್ದೇನೆ. ನನ್ನ ಮಕ್ಕಳು ಈ ಲೋಕದಲ್ಲಿ ಬಲಿಷ್ಠರಾಗುವರು ಎಂದು ನಿನ್ನ ವಾಕ್ಯ ಹೇಳುತ್ತದೆಯಲ್ಲಾ” ಎಂಬದಾಗಿ ನೀವು ಕರ್ತನಿಗೆ ಹೇಳಬಹುದು. ಇದರ ಅರ್ಥ ನಿಮ್ಮ ಮಕ್ಕಳು ಈ ಲೋಕದಲ್ಲಿ ಏನೋ ವಿಶೇಷವಾಗಿ ಆಗುತ್ತಾರೆ. ದೇವರ ರಾಜ್ಯಕ್ಕಾಗಿ ಅವರು ಏನೋ ವಿಶೇಷವಾಗಿ ಮಾಡುತ್ತಾರೆ. ಅವರು ಈ ಲೋಕದಲ್ಲಿ ವ್ಯರ್ಥವಾಗಿ ಇರುವದಿಲ್ಲ. ಅವರು ದೇವರಿಗಾಗಿ ಪ್ರಭಾವವನ್ನು ಬೀರುತ್ತಾರೆ.

ಯೆಶಾಯ 54:13

ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗುವರು,
ಅವರಿಗೆ ಅಧಿಕ ಸುಕ್ಷೇಮವಾಗುವದು.

ಮೇಲೆಯೇ ಕೊಡಲಾಗಿರುವ ವಾಕ್ಯವು ನಿಮ್ಮ ನಿರೀಕ್ಷೆಗೆ ಆಧಾರವಾಗಿರಲಿ. ನಿರೀಕ್ಷಿಸುವದನ್ನು ಮುಂದುವರೆಸಿರಿ. ಬಹುಶಃ ನಿಮ್ಮ ಮಗು ಇಂದು ನೀವು ಹೇಳುತ್ತಿರುವದನ್ನು ಕಿವಿ ಮೇಲೆ ಹಾಕಿಕೊಳ್ಳದೆ ಇರಬಹುದು. ಆದರೆ ನೀವು ನಿರೀಕ್ಷೆಗೆ ವಿರುದ್ಧವಾಗಿ ವಾಕ್ಯದಲ್ಲಿ ನಿರೀಕ್ಷೆಯನ್ನಿಡಬಹುದು.

ಸ್ವಸ್ಥತೆಗಾಗಿ ನಿರೀಕ್ಷೆ

ನಿಮ್ಮಲ್ಲಿ ಕೆಲವರು ಕಾಯಿಲೆಗಳು ಮತ್ತು ಅನಾರೋಗ್ಯಗಳಿಂದ ಬಳಲುತ್ತಿರಬಹುದು ಹಾಗೂ ಯಾವುದೇ ನಿರೀಕ್ಷೆಯಿಲ್ಲ ಎಂದು ವೈದ್ಯರು ನಿಮಗೆ ಹೇಳಿರಬಹುದು. ದೇವರ ಬಗ್ಗೆ ವಾಕ್ಯವು ಹೇಳುವದನ್ನು ನೋಡಿಕೊಳ್ಳೋಣ.

ಕೀರ್ತನೆಗಳು 103:3

ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ, ಸಮಸ್ತರೋಗಗಳನ್ನು ವಾಸಿಮಾಡುವವನೂ,

ಇದುವೇ ನಿಮಗಿರುವ ನಿರೀಕ್ಷೆಯಾಗಿದೆ. ನಿಮ್ಮ ನಿರೀಕ್ಷೆಯನ್ನು ಜೀವಂತವಾಗಿಟ್ಟುಕೊಳ್ಳಿರಿ. ಸತ್ಯವೇದವು ಹೇಳುವ ಪ್ರಕಾರ ನಿಮ್ಮನ್ನು ಸ್ವಸ್ಥರನ್ನಾಗಿಯೂ ಮತ್ತು ಸೌಖ್ಯರನ್ನಾಗಿಯೂ ಚಿತ್ರಿಸಿಕೊಳ್ಳಿರಿ.

ಜ್ಞಾನೋಕ್ತಿಗಳು 3:7,8

7 ನೀನೇ ಬುದ್ದಿವಂತನು ಎಂದೆಣಿಸದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.
8 ಇದರಿಂದ ನಿನ್ನ ದೇಹಕ್ಕೆ ಆರೋಗ್ಯವೂ ಎಲುಬುಗಳಿಗೆ ಸಾರವೂ ಉಂಟಾಗುವವು.

ದೇವರ ಮೇಲೆ ನಿಮಗಿರುವ ಗೌರವಪೂರ್ವಕವಾದ ಭಯ ನಿಮ್ಮ ದೇಹಕ್ಕೆ ಆರೋಗ್ಯವನ್ನು ಒದಗಿಸುತ್ತದೆ.

೬ ನಿರೀಕ್ಷೆಯಿಲ್ಲದ ಪರಿಸ್ಥಿತಿಯ ನಡುವೆ ನಾನು ಏನು ಮಾಡುತ್ತೇನೆ?

ರೋಮಾಪುರದವರಿಗೆ 4:17-21

17 ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲ ಪಿತೃವಾಗಿ ನೇಮಿಸಿದ್ದೇನೆಂದು ಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಅಬ್ರಹಾಮನು ನಮ್ಮೆಲ್ಲರಿಗೂ ದೇವರ ಸನ್ನಿಧಿಯಲ್ಲಿ ಮೂಲ ಪಿತೃವಾಗಿದ್ದಾನೆ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲದ್ದನ್ನು ಇರುವದಾಗಿ ಕರೆಯುವವನಾಗಿಯೂ ಇದ್ದಾನೆಂದು ಅಬ್ರಹಾಮನು ನಂಬಿದನು.
18 ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವದು ಎಂಬದಾಗಿ ತನಗೆ ಹೇಳಲ್ಪಟ್ಟ ಮಾತು ನೆರವೇರುವದಕ್ಕೆ ಮಾರ್ಗ ತೋರದೆ ಇರುವದರಿಂದ ಅಬ್ರಹಾಮನು ತಾನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ನಿರೀಕ್ಷಿಸಿ ನಂಬಿದನು.
19 ಅವನು ಹೆಚ್ಚುಕಡಿಮೆ ನೂರು ವರುಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದುಹೋಯಿತೆಂದೂ ಯೋಚಿಸಿದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ.
20 ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ.
21 ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು ದೃಢನಂಬಿಕೆಯುಳ್ಳವನಾದನು.

ನಿರೀಕ್ಷೆಯಿಲ್ಲದ ಹತಾಶೆಯ ಪರಿಸ್ಥಿತಿಯನ್ನು ದೇವರು ಬದಲಾಯಿಸಬೇಕಾದರೆ ನಾವು ಅದರ ನಡುವೆ ಇರುವಾಗ ಏನು ಮಾಡಬೇಕು? ಅಬ್ರಹಾಮನ ಜೀವಿತದಿಂದ ನಾವು ಯಾವ ಪಾಠವನ್ನು ಕಲಿಯಬಹುದು? ದೇವರು ನಿರೀಕ್ಷೆಯೇ ಇಲ್ಲದ ಹತಾಶ ಪರಿಸ್ಥಿತಿಯನ್ನು ಬದಲಾಯಿಸುವಂತೆ ಅವನು ಏನು ಮಾಡಿದನು? ಸತ್ಯವೇದವು ಹೇಳುವದೇನೆಂದರೆ ಅಬ್ರಹಾಮನು, ನಿರೀಕ್ಷೆಗೆ ಆಸ್ಪದವಿಲ್ಲದಿದ್ದರೂ, ತನಗೆ ವಾಗ್ದಾನ ಮಾಡಿದಂತೆ ತಾನಾಗುವನೆಂದು ನಂಬಿದನು (ರೋಮಾಪುರದವರಿಗೆ 4:18). ದೇವರು ಏನೇ ಹೇಳಿದರೂ ಎಲ್ಲವೂ ನೆರವೇರುತ್ತದೆ ಎಂದು ನೀವು ನಂಬುತ್ತೀರೋ? ಉದಾಹರಣೆಗೆ, “ನಿನ್ನ ಕಾರ್ಯಗಳೆಲ್ಲವೂ ಸಫಲವಾಗುವವು” ಎಂದು ದೇವರ ವಾಕ್ಯವು ಹೇಳುತ್ತದೆ, ನೀವು ಅದನ್ನು ನಂಬಬೇಕು. ನೀವು ನಂಬುತ್ತೀರೋ?

ದೇವರು ಹೇಳಿದಂತೆಯೇ ನೀವಾಗುವಿರಿ ಎಂಬದನ್ನು ನಿರೀಕ್ಷೆಯೊಂದಿಗೆ ನಂಬಿರಿ

ದೇವರು ಮತ್ತು ಆತನ ವಾಕ್ಯ ಎರಡೂ ಒಂದೇ ಆಗಿದೆ. ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ನೀವು ನಂಬಬೇಕು. ಆದ್ದರಿಂದ, ನಿರೀಕ್ಷೆಯಿಲ್ಲದೆ ಹತಾಶವಾಗಿದ್ದರೂ, ದೇವರು ವಾಗ್ದಾನ ಮಾಡಿರುವಂತೆ ನೀವಾಗುವಿರಿ ಎಂಬದನ್ನು ನೀವು ನಂಬಬೇಕು. ನಿರೀಕ್ಷೆಯನ್ನು ಕಳೆದುಕೊಳ್ಳಬೇಡಿರಿ.

ನಿರೀಕ್ಷೆಯಿಲ್ಲದ ಪರಿಸ್ಥಿತಿಯ ಹತಾಶೆಯು ನಿಮ್ಮ ನಂಬಿಕೆಗೆ ಜಡ/ಜೋಮು ಹಿಡಿಸಲು ಅವಕಾಶ ಕೊಡಬೇಡಿರಿ

ಅಬ್ರಹಾಮನು “ಹೆಚ್ಚುಕಡಿಮೆ ನೂರು ವರುಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದುಹೋಯಿತೆಂದೂ ಯೋಚಿಸಿದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ” (ರೋಮಾಪುರದವರಿಗೆ 4:19). ಅವನು ತನ್ನ ನಂಬಿಕೆ ಕುಂದಿಹೋಗಲು ಬಿಡಲಿಲ್ಲ ಯಾಕಂದರೆ ಅವನು ತನ್ನ ದೇಹದ ಸ್ಥಿತಿಯನ್ನಾಗಲಿ ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆಯಾಗಲಿ ಆಲೋಚಿಸಲಿಲ್ಲ. ಯಾವುದೇ ನಿರೀಕ್ಷೆಯಿಲ್ಲದ ಹತಾಶ ಪರಿಸ್ಥಿತಿಗೂ ನಿಮ್ಮ ನಂಬಿಕೆಯನ್ನು ಕುಂದಿಸುವ ಅವಕಾಶವನ್ನು ಕೊಡಬೇಡಿರಿ. ಸುತ್ತಮುತ್ತಲು ನೋಡಿ “ಇದನ್ನು ಸರಿಪಡಿಸಲು ಆಗುವದಿಲ್ಲ” ಎಂಬದಾಗಿ ಹೇಳಬೇಡಿರಿ.

ಆದರೂ ಇದರ ಅರ್ಥ ನೀವು ಪರಿಸ್ಥಿತಿಗಳನ್ನು ಅಲ್ಲಗಳೆಯಬೇಕು ಎಂಬದಲ್ಲ. ನಿಮ್ಮ ಪರಿಸ್ಥಿತಿಗಳ ವಾಸ್ತವವು ನಿಮ್ಮ ನಂಬಿಕೆಯನ್ನು ಕುಂದಿಸಲು ಅನುಮತಿಸಬೇಡಿರಿ ಅಷ್ಟೆ. ಬದಲಾಗಿ, ನೀವು ನಿಮ್ಮ ಕಲ್ಪನೆಯ “ನಾರುಬಟ್ಟೆಯ” ಮೇಲೆ ನಿಮಗೆ ವಾಗ್ದಾನ ಮಾಡಲ್ಪಟ್ಟ ಫಲಿತಾಂಶದ ಚಿತ್ರಣಕ್ಕೆ “ಬಣ್ಣ” ಹಚ್ಚಬೇಕು. ಉದಾಹರಣೆಗೆ, ನಿಮ್ಮನ್ನು ಸಂಪೂರ್ಣವಾಗಿ ಗುಣವಾಗಿರುವ ಹಾಗೆ ನೋಡಿಕೊಳ್ಳಿರಿ, ನಿಮ್ಮನ್ನು ಜೀವನದಲ್ಲಿ ಯಶಸ್ವೀ ವ್ಯಕ್ತಿಯಾಗಿ ನೋಡಿಕೊಳ್ಳಿರಿ, ನಿಮ್ಮ ವೈವಾಹಿಕ ಜೀವನವು ಸ್ವಸ್ಥವಾಗಿರುವಂತೆ ಮತ್ತು ಪುನಃಸ್ಥಾಪನೆಯಾಗಿರುವಂತೆ ನೋಡಿಕೊಳ್ಳಿರಿ, ನಿಮ್ಮ ಮಕ್ಕಳು ದೇವರ ಸೇವೆಮಾಡುತ್ತಿರುವಂತೆ ಮತ್ತು ಆತನ ಮಾರ್ಗಗಳಲ್ಲಿ ನಡೆದಾಡುತ್ತಿರುವಂತೆ ನೋಡಿಕೊಳ್ಳಿರಿ. ದೇವರ ವಾಕ್ಯದ ಆಧಾರದಲ್ಲಿ ಅಂಥ ಚಿತ್ರವನ್ನು ಬಿಡಿಸಿರಿ ಮತ್ತು ಆಗಾಗ ಅದನ್ನು ನೋಡುತ್ತಾ ಇರಿ!

ಒಂದು ದಿನ ರಾತ್ರಿ, ದೇವರು ಅಬ್ರಹಾಮನನ್ನು ಅವನ ಗುಡಾರದೊಳಗಿಂದ ಹೊರಗೆ ಕರೆದುಕೊಂಡು ಬಂದನು ಮತ್ತು ಆಕಾಶದಲ್ಲಿರುವ ನಕ್ಷತ್ರಗಳನ್ನು ನೋಡು ಎಂದು ಅವನಿಗೆ ಹೇಳಿದನು. ಮತ್ತು ಆತನು ಅವನಿಗೆ ಹೇಳಿದ್ದೇನೆಂದರೆ, “ನಿನ್ನ ಸಂತಾನವು ಅಷ್ಟಾಗುವದು” (ಆದಿಕಾಂಡ 15:5ಆ). ಅಬ್ರಹಾಮನು ಆಗಲೇ ದೇವರ ವಾಗ್ದಾನದ “ಚಿತ್ರವನ್ನು” ತನ್ನ ಮನಸ್ಸಿನಲ್ಲಿ ಬಿಡಿಸಿಕೊಂಡನು. ಆಕಾಶದಲ್ಲಿರುವ ಅಸಂಖ್ಯವಾದ ನಕ್ಷತ್ರಗಳಷ್ಟಾಗುವ ತನ್ನ ಸಂತಾನವನ್ನು “ನೋಡಲು” ಅವನಿಗೆ ಸಾಧ್ಯವಾಯಿತು. ಪ್ರತಿಬಾರಿ ಅಬ್ರಹಾಮನಿಗೆ ತನ್ನ ದೇಹದ ಸ್ಥಿತಿ ಮತ್ತು ಸಾರಳಿಗೆ ಗರ್ಭಕಾಲ ಹೋಯಿತು ಎಂಬ ಯೋಚನೆ ಬರುವಾಗಲೂ, ಅಸಂಖ್ಯವಾಗಿರುವ ಆಕಾಶದ ನಕ್ಷತ್ರ ಮತ್ತು ಸಮುದ್ರದ ಉಸುಬಿನಷ್ಟು ನಿನಗೆ ಸಂತತಿಯನ್ನು ಕೊಡುತ್ತೇನೆ ಎಂದು ದೇವರು ಮಾಡಿದ ವಾಗ್ದಾನವನ್ನು ಅವನು ನೆನಪುಮಾಡಿಕೊಳ್ಳುತ್ತಿದ್ದನು.

ಅನೇಕ ಸಲ, ನಾನು ಸಾವಿರಾರು ಜನರಿಗೆ ದೇವರ ವಾಕ್ಯ ಬೋಧಿಸುತ್ತಿರುವ ಹಾಗೆ ಕಲ್ಪಿಸಿಕೊಂಡಿದ್ದೇನೆ. ನಮ್ಮ ಸ್ಥಳೀಯ ಸಭೆಯು ನಮ್ಮ ಪಟ್ಟಣದ ಬೇರೆಬೇರೆ ಸ್ಥಳಗಳಲ್ಲಿದ್ದು ಪ್ರತಿಯೊಂದು ಸ್ಥಳದಲ್ಲಿಯೂ ಸಾವಿರಾರು ಜನ ವಿಶ್ವಾಸಿಗಳಿರುವಂತೆ ಊಹಿಸಿಕೊಂಡಿದ್ದೇನೆ. ಆದ್ದರಿಂದಲೇ, ಭಾನುವಾರ ಮುಂಜಾನೆ ಸಭೆಯಲ್ಲಿ ಖಾಲಿಯಾಗಿದ್ದ ಕುರ್ಚಿಗಳು ನನ್ನ ನಂಬಿಕೆಯನ್ನು ಕುಂದಿಸಲಿಲ್ಲ, ನನ್ನ ಮನಸ್ಸಿನಲ್ಲಿ, ನಮ್ಮ ಅಂತಿಮ ಸ್ಥಿತಿಯ ಚಿತ್ರಣವಿತ್ತು. ಮತ್ತು ಈಗ, ಪ್ರತಿ ಭಾನುವಾರ, ನನಗಿದ್ದ ನಿರೀಕ್ಷೆಯು ವಾಸ್ತವದಲ್ಲಿ ಪ್ರಕಟವಾಗುವದನ್ನು ನೋಡುತ್ತಾ ಇದ್ದೇನೆ. ನಿಮ್ಮ ಸದ್ಯದ ಪರಿಸ್ಥಿತಿಗಳು ಏನೇ ಆಗಿರಬಹುದು, ನಿಮ್ಮ ನಿರ್ದಿಷ್ಟ ಸ್ಥಾನದ ಚಿತ್ರ ಯಾವಾಗಲೂ ನಿಮ್ಮೊಂದಿಗೆ ಇರಲಿ ಮತ್ತು ನಿರೀಕ್ಷಿಸುವದನ್ನು ಮುಂದುವರೆಸಿರಿ.

ದೃಢಸಂಕಲ್ಪ ಮತ್ತು ಸಹನೆಯನ್ನು ಪ್ರದರ್ಶಿಸಿರಿ

ಅಬ್ರಹಾಮನ ಜೀವಿತದಲ್ಲಿ ನಾವು ಗಮನಿಸುವ ಮತ್ತೊಂದು ಸಂಗತಿ ಏನೆಂದರೆ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ (ರೋಮಾಪುರದವರಿಗೆ 4:20). ಅವನು ದೇವರ ವಾಗ್ದಾನದ ವಿಷಯದಲ್ಲಿ ಎಡವಲಿಲ್ಲ. ಅವನು ದೃಢಸಂಕಲ್ಪ ಮತ್ತು ಸಹನೆಯನ್ನು ಪ್ರದರ್ಶಿಸಿದನು. ನಿರೀಕ್ಷೆಯೊಂದಿಗೆ, ದೃಢಸಂಕಲ್ಪವುಳ್ಳವರಾಗಿರುವದು ಮತ್ತು ಸಹನೆವುಳ್ಳವರಾಗಿರುವದು ಬಹಳ ಪ್ರಾಮುಖ್ಯವಾಗಿದೆ.

ರೋಮಾಪುರದವರಿಗೆ 8:25

“ಆದರೆ ಕಾಣದಿರುವದನ್ನು ನಾವು ಎದುರುನೋಡುವವರಾಗಿದ್ದರೆ ತಾಳ್ಮೆಯಿಂದ ಕಾದುಕೊಂಡಿರುವೆವು.”

ನಮ್ಮಲ್ಲಿ ಅನೇಕರು ವಿವಿಧ ಕಾರ್ಯಗಳನ್ನು ಎದುರುನೋಡುತ್ತೇವೆಯಾದರೂ, ಅವು ಕೂಡಲೇ ಸಿಗಬೇಕೆಂದು ಬಯಸುತ್ತೇವೆ. ಸತ್ಯವೇದವಾದರೋ ನಮ್ಮ ಕಣ್ಣಿಗೆ ಕಾಣದಿರುವ ವಿಷಯಗಳಿಗಾಗಿ ತಾಳ್ಮೆಯಿಂದ ಕಾದುಕೊಂಡಿರಬೇಕೆಂದು ಹೇಳುತ್ತದೆ. ಸುಲಭವಾಗಿ ಬಿಟ್ಟುಕೊಡಬೇಡಿರಿ. ಸ್ವಲ್ಪ ತಾಳ್ಮೆಯಿಂದ ಕಾಯಿರಿ. ಅಪೊಸ್ತಲನಾದ ಪೌಲನು ಹೇಳಿರುವದೇನೆಂದರೆ,

1 ಥೆಸಲೋನಿಕದವರಿಗೆ 1:3

ನಾವು ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ, ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಣ ನಿರೀಕ್ಷೆಯಿಂದುಂಟಾದ ನಿಮ್ಮ ಸೈರಣೆಯನ್ನೂ ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕಮಾಡಿಕೊಂಡು,

ನಿರೀಕ್ಷೆಯು ತಾಳ್ಮೆಯಾಗಿದೆ! ವಾಕ್ಯದ ಮೇಲೆ ಆಧಾರವಾಗಿರುವ ಯಥಾರ್ಥವಾದ ನಿರೀಕ್ಷೆಯು ತಾಳ್ಮೆಯಾಗಿದೆ.

ಪ್ರಲಾಪಗಳು 3:26

ಯೆಹೋವನ ರಕ್ಷಣಕಾರ್ಯವನ್ನು ಎದುರುನೋಡುತ್ತಾ ಶಾಂತವಾಗಿ ಕಾದುಕೊಂಡಿರುವದು ಒಳ್ಳೇದು.

ನಿಮ್ಮಲ್ಲಿ ನಿಜವಾದ ನಿರೀಕ್ಷೆಯಿರುವಾಗ, ಶಾಂತತೆ, ನಿಶ್ಯಬ್ದತೆ ಮತ್ತು ಹಿಡಿತ ಇರುತ್ತದೆ. ಅದು ಬರುತ್ತದೆ ಎಂದು ನಿಮಗೆ ಗೊತ್ತಿರುತ್ತದೆ. ನೀವು ಗೊಂದಲಕ್ಕೆ ಒಳಗಾಗುವದಿಲ್ಲ, ಬೇಸರಗೊಳ್ಳುವದಿಲ್ಲ, ಕ್ಷೋಭೆಗೊಳಗಾಗುವದಿಲ್ಲ ಮತ್ತು ನಿಮಗೆ ಬೇಕಾಗಿರುವದನ್ನು ಪಡೆಯಲು ಎಲ್ಲರನ್ನೂ ಮಾರ್ಗದಿಂದ ಸರಿಸಲು ಬಯಸುವದಿಲ್ಲ. ಬದಲಾಗಿ, ನೀವು ಶಾಂತರಾಗಿರುವಿರಿ ಯಾಕಂದರೆ ನೀವು ನಂಬುವಂಥದ್ದು ಖಂಡಿತವಾಗಿಯೂ ನೆರವೇರುತ್ತದೆ ಎಂದು ನಿಮಗೆ ಗೊತ್ತಿರುತ್ತದೆ. ನೀವು ದೃಢಸಂಕಲ್ಪವುಳ್ಳವರಾಗಿರುವಿರಿ ಮತ್ತು ಸಹನೆಯಿಂದ ಕಾಯುವಿರಿ. ಸತತವಾಗಿ ದೇವರ ವಾಕ್ಯಕ್ಕೆ ವಿಧೇಯರಾಗುವಾಗ ದೃಢಸಂಕಲ್ಪವು ವ್ಯಕ್ತವಾಗುತ್ತದೆ. ಸುಲಭವಾದ ಮಾರ್ಗವನ್ನು ಆರಿಸಿಕೊಳ್ಳಬೇಡಿರಿ. ಅದರಿಂದ ವಿಷಯಗಳು ಮತ್ತಷ್ಟು ಹದಗೆಡುತ್ತವೆ!

ನಿಮ್ಮ ಸಂತೋಷವನ್ನು ಕಾಪಾಡಿಕೊಳ್ಳಿರಿ; ದೇವರಿಗೆ ಸ್ತೋತ್ರ ಹೇಳಿರಿ

ಅಬ್ರಹಾಮನು ದೇವರನ್ನು ಘನಪಡಿಸಿದನು (ರೋಮಾಪುರದವರಿಗೆ 4:20). ನಿಮಗೆ ನಿರೀಕ್ಷೆಯಿರುವಾಗ, ನಿಮಗೆ ಸಂತೋಷವೂ ಇರುತ್ತದೆ. ಯಾಕಂದರೆ ದೇವರ ವಾಕ್ಯ ಹೇಳುವದರ ಮೇಲೆ ನಿಮಗೆ ನಿರೀಕ್ಷೆ ಇರುವದರಿಂದ, ನೀವು ಸಂತೋಷವಾಗಿರಬಹುದು. ಪರಿಸ್ಥಿತಿಗಳ ನಿಮಿತ್ತವಾಗಿಯೂ ನೀವು ಸಂತೋಷಿಸುವಂತ ಸಮಯಗಳೂ ಇರುತ್ತವೆ. ಆದರೆ, ನೀವು ನಿರೀಕ್ಷೆಯಿಂದ ಸಂತೋಷಿಸುವಂಥ ಸಮಯಗಳೂ ಇರುತ್ತವೆ.

ನಿಮ್ಮಲ್ಲಿ ಯಾರಿಗಾದರು ಚಿಕ್ಕ ಮಕ್ಕಳಿರುವದಾದರೆ ಅವರ ಜನ್ಮದಿನಗಳು ಹತ್ತಿರವಾಗುವಾಗ ಅವರು ಎಷ್ಟು ಹರ್ಷಪಡುತ್ತಾರೆ ಎಂಬದು ಗೊತ್ತಿರುತ್ತದೆ! ನಮ್ಮ ಮಗಳಾದ, ರೂತಳು, ತಾನು ಚಿಕ್ಕವಳಾಗಿದ್ದಾಗ ತನ್ನ ಜನ್ಮದಿನವನ್ನು ಆಚರಿಸಿಕೊಳ್ಳುವಾಗ, ಒಂದುವಾರ ಮುಂಚಿತವಾಗಿಯೇ ಅದಕ್ಕಾಗಿ ಕಾಯುವದನ್ನು ಪ್ರಾರಂಭಿಸುತ್ತಿದ್ದಳು. ಆಕೆ “ನಿರೀಕ್ಷೆಯಿಂದ ಸಂತೋಷಿಸುತ್ತಿದ್ದಳು!” ಆಕೆ ಹರ್ಷಗೊಳ್ಳುತ್ತಿದ್ದಳು, ಮತ್ತು ತನ್ನ ಜನ್ಮದಿನದ ಹಿಂದಿನ ರಾತ್ರಿ, ಆಕೆ ನನಗೆ, “ಅಪ್ಪಾ, ನಾನು ಮುಂಜಾನೆ ಎದ್ದೇಳುವಾಗ, ‘ಗುಡ್ ಮಾರ್ನಿಂಗ್ ಬರ್ತಡೇ ಹುಡುಗಿ’” ಎಂಬದಾಗಿ ಹೇಳಬೇಕು ಎಂದು ಹೇಳುತ್ತಿದ್ದಳು. ಮಾರಣೆಯ ದಿನ ಆಕೆ ತನ್ನ ಜನ್ಮದಿನವನ್ನು ಆಚರಿಸಿಕೊಳ್ಳುತ್ತಾಳೆ ಎಂಬ ವಿಷಯ ಆಕೆಗೆ “ಮೊದಲೇ” ಸಂತೋಷವನ್ನುಂಟು ಮಾಡಿತ್ತು. ಆಕೆಯ ಜನ್ಮದಿನ ಇನ್ನೂ ಬಂದಿರಲಿಲ್ಲ, ಆದರೆ ಆಕೆಗಿದ್ದ ನಿರೀಕ್ಷೆಯ ನಿಮಿತ್ತ ಆಕೆ ಸಂತೋಷವಾಗಿದ್ದಳು.

ಕ್ರೈಸ್ತರಾಗಿ ನಾವು, ನಿರೀಕ್ಷೆಯಲ್ಲಿ ಸಂತೋಷಿಸುತ್ತೇವೆ. ದೇವರು ಕಾರ್ಯಗಳನ್ನು ಬದಲಾಯಿಸುತ್ತಾನೆ ಮತ್ತು ನಮ್ಮ ಪರಿಸ್ಥಿತಿಗಳು ಬದಲಾಗುತ್ತವೆ ಎಂದು ನಾವು ಸಂತೋಷಿಸುತ್ತೇವೆ. ನಾವು ನಿರೀಕ್ಷೆಯಿಂದ ಸಂತೋಷಿಸುತ್ತೇವೆ.

ರೋಮಾಪುರದವರಿಗೆ 15:13

ನಿರೀಕ್ಷೆಯ ಮೂಲನಾದ ದೇವರು ನಂಬಿಕೆಯಿಂದುಂಟಾಗುವ ಸಂತೋಷವನ್ನೂ ಮನಶ್ಯಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಿ ನೀವು ಪವಿತ್ರಾತ್ಮನ ಬಲಗೂಡಿದವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ.

ರೋಮಾಪುರದವರಿಗೆ 12:12

ಕ್ರೈಸ್ತರು ನಿರೀಕ್ಷಿಸುವ ಮಹಾಪದವಿಯನ್ನು ನೆನಸಿ ಉಲ್ಲಾಸವಾಗಿರ್ರಿ. ಉಪದ್ರವಗಳಲ್ಲಿ ಸೈರಣೆಯುಳ್ಳವರಾಗಿರ್ರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ.

ನಾವು ನಿರೀಕ್ಷೆಯಲ್ಲಿ ಸಮೃದ್ಧರಾಗಬಹುದು ಮತ್ತು ನಿರೀಕ್ಷೆಯ ಮೂಲನಾದ ದೇವರು ಸಂತೋಷವನ್ನೂ ಮನಶ್ಯಾಂತಿಯನ್ನು ನಮ್ಮೊಳಗೆ ತುಂಬಿಸುತ್ತಾನೆ. ನಾವು ನಂಬುವಾಗ ನಮ್ಮ ಜೀವಿತದೊಳಗೆ ಸಂತೋಷವೂ ಮನಶ್ಯಾಂತಿಯೂ ಬರುತ್ತದೆ. ಕೆಲವೊಮ್ಮೆ, ಕಾಯುವಿಕೆ ಅತಿಯಾಗುವಾಗ ಜನರು ಆರೋಪ ಮಾಡಲು ಮತ್ತು ಗುಣಗುಟ್ಟಲು ಪ್ರಾರಂಭಿಸುತ್ತಾರೆ. ಅವರು ಮಾಡಬೇಕಾಗಿರುವದೆಲ್ಲವೂ ನಿರೀಕ್ಷೆಯ ಚಿತ್ರವನ್ನು ಇಟ್ಟುಕೊಳ್ಳಬೇಕು. ಸದ್ಯದ ಪರಿಸ್ಥಿತಿಗಳಿಂದ ಬೇಸರಗೊಳ್ಳುವ ಬದಲು, ನಿರೀಕ್ಷೆಯ ಚಿತ್ರವನ್ನು ಕಾಪಾಡಿಕೊಳ್ಳಿರಿ. ಚಿತ್ರವು ಒಂದು ದಿನ ನಿಜವಾಗುತ್ತದೆ ಎಂಬದು ನಿಮಗೆ ಗೊತ್ತಿರುವದರಿಂದ ನೀವು ಸಂತೋಷವಾಗಿಯೂ ಮನಶ್ಯಾಂತಿಯುಳ್ಳವರಾಗಿಯೂ ಇರುವಿರಿ.

ಕೀರ್ತನೆಗಳು 42:5

ನನ್ನ ಮನವೇ, ನೀನು ಕುಗ್ಗಿಹೋಗಿರುವದೇನು? ಹೀಗೆ ವ್ಯಥೆಪಡುವದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ. ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.

ಕೀರ್ತನೆಗಳು 71:14

ನಾನಂತೂ ನಿರೀಕ್ಷಿಸಿಕೊಂಡೇ ಇರುವೆನು; ನಿನ್ನನ್ನು ಅತ್ಯಧಿಕವಾಗಿ ಹೊಗಳುತ್ತಿರುವೆನು.

ಒಬ್ಬನು ನಿರೀಕ್ಷೆಯುಳ್ಳವನಾಗಿರುವಾಗ ಅವನಲ್ಲಿ ಸಂತೋಷದ ಭಾವ ಮತ್ತು ದೇವರನ್ನು ಸ್ತುತಿಸುವ ಸಾಮರ್ಥ್ಯ ಇರುತ್ತದೆ. ಬಹುಶಃ ನೀವು ಇದನ್ನು ಓದುತ್ತಿರುವಾಗಲೂ, ಯಾವುದೇ ನಿರೀಕ್ಷೆಯಿಲ್ಲದ ಪರಿಸ್ಥಿತಿಯಲ್ಲಿರಬಹುದು ಮತ್ತು “ನಾನು ಸಂತೋಷವಾಗಿರುವದು ಹೇಗೆ?” ಎಂದು ಯೋಚಿಸುತ್ತಿರಬಹುದು. ಸತ್ಯವೇದವು ಹೇಳುವದೇನೆಂದರೆ, “ನಿರೀಕ್ಷೆಯಲ್ಲಿ ಸಂತೋಷಿಸಿರಿ!” ನಾವು ದೇವರಿಗೆ ಸ್ತೋತ್ರಗಳನ್ನು ಸಲ್ಲಿಸುವದು ಹೇಗೆ? ನಮಗಿರುವ ನಿರೀಕ್ಷೆಯ ನಿಮಿತ್ತ ನಾವು ದೇವರನ್ನು ಸ್ತುತಿಸಬಹುದು. ಇಂದು, ಕಾರ್ಯಗಳು ಸರಿ ಇಲ್ಲವೆಂದು ಅನ್ನಿಸಬಹುದು. ಇಂದು, ಪರಿಸ್ಥಿತಿಗಳು ಕಠಿಣವಾಗಿರಬಹುದು. ಆದರೂ ನೀವು ಆತನನ್ನು ಸ್ತುತಿಸಬಹುದು ಯಾಕಂದರೆ ಅವುಗಳು ಹೆಚ್ಚು ಕಾಲ ಇರುವದಿಲ್ಲ ಎಂಬದು ನಿಮಗೆ ಗೊತ್ತಿದೆ. ಸತ್ಯವೇದದ ದೇವರು ನಿರೀಕ್ಷೆಯಿಲ್ಲದ ಹತಾಶ ಪರಿಸ್ಥಿತಿಗಳನ್ನು ಬದಲಾಯಿಸುವ ದೇವರಾಗಿದ್ದಾನೆ. ಆತನು ನಿಮಗಾಗಿ ಈ ಕಾರ್ಯವನ್ನು ಮಾಡುತ್ತಾನೆ. ನಿಮ್ಮ ನಿರೀಕ್ಷೆಯನ್ನು ಜೀವಂತವಾಗಿಟ್ಟುಕೊಳ್ಳಿರಿ. ನಿರೀಕ್ಷೆಯಲ್ಲಿ ನಂಬಿಕೆಯನ್ನಿಡಿರಿ.

ದೇವರಿಗೆ ಸ್ತೋತ್ರ

ಬರೆದಿರುವವರು: ಎಲ್ಲಿಯಟ್ ಬಿ. ಬ್ಯಾನಿಸ್ಟರ್ ಮತ್ತು ಮೈಕಲ್ ವಿನ್ಸೆಂಟ್ ಹಡ್ಸನ್

ವಚನ 1
ನಿಮ್ಮ ಕನಸುಗಳನ್ನೆಲ್ಲಾ ಛಿದ್ರಗೊಳಿಸುವ
ಹೋರಾಟದ ಎದುರು ನೀವು ನಿಲ್ಲುವಾಗ
ಮತ್ತು ಸೈತಾನನ ಪ್ರಕಟಗೊಂಡ ಯೋಜನೆಗಳಿಂದ
ನಿಮ್ಮ ನಿರೀಕ್ಷೆಗಳು ಕ್ರೂರವಾಗಿ ಪುಡಿಮಾಡಲ್ಪಡುವಾಗ
ಮತ್ತು ಲೋಕದ ಹೆದರಿಕೆಗಳಿಗೆ ಒಪ್ಪಿಸಿಕೊಡುವ
ಪ್ರೇರಣೆ ನಿಮ್ಮೊಳಗಿಂದಲೇ ಕಾಣಿಸಿಕೊಳ್ಳುವಾಗ
ನೀವು ಯಾವ ನಂಬಿಕೆಯ ಮೇಲೆ ನಿಂತಿದ್ದೀರೋ, ಅದು ಕಣ್ಮರೆಯಾಗಲು ಅನುಮತಿಸಬೇಡಿರಿ

ಚರಣ
ದೇವರಿಗೆ ಸ್ತೋತ್ರ
ಆತನನ್ನು ಸ್ತುತಿಸುವವರ ಮೂಲಕ ಆತನು ಕಾರ್ಯಗಳನ್ನು ಮಾಡುತ್ತಾನೆ
ದೇವರಿಗೆ ಸ್ತೋತ್ರ
ನಮ್ಮ ದೇವರು ಸ್ತೋತ್ರಗಳಲ್ಲಿ ವಾಸಿಸುತ್ತಾನೆ,
ದೇವರಿಗೆ ಸ್ತೋತ್ರ
ನಿಮ್ಮನ್ನು ಕಟ್ಟಿಹಾಕುತ್ತಿವೆ ಎಂಬದಾಗಿ ಅನ್ನಿಸುವ ಬೇಡಿಗಳು
ನೀವು ಆತನನ್ನು ಸ್ತುತಿಸುವಾಗ
ನಿಮ್ಮ ಹಿಂದೆ ಬಲವಿಲ್ಲದವುಗಳಾಗಿ ಬಿದ್ದು ಹೋಗುತ್ತವೆ ಎಂಬದನ್ನು ನೆನಪಿಸುತ್ತವೆ

ವಚನ 2
ಈಗ ಸೈತಾನನು ಸುಳ್ಳಗಾರನಾಗಿದ್ದಾನೆ
ನಾವು ಕಾಮಗಾರಿಗಳೆಂದು ಯೋಚಿಸುವಂತೆ
ಮಾಡಲು ಅವನು ಬಯಸುತ್ತಾನೆ
ನಾವು ಅರಸನ ಮಕ್ಕಳಾಗಿದ್ದೇವೆ
ಎಂಬದು ಅವನಿಗೆ ಗೊತ್ತಾಗುವಾಗ
ನಂಬಿಕೆಯ ಗುರಾಣಿಯನ್ನು ಹಿಡಿದುಕೊಳ್ಳಿರಿ
ಯಾಕಂದರೆ ಯುದ್ಧವನ್ನು ಗೆಲ್ಲಬೇಕು
ಯೇಸು ಕ್ರಿಸ್ತನು ಎದ್ದು ಬಂದಿದ್ದಾನೆ ಎಂಬದು ನಮಗೆ ಗೊತ್ತಿದೆ
ಆದ್ದರಿಂದ ಕಾರ್ಯವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ

ಬಹುಶಃ ನೀವು ಈ ಪುಸ್ತಕವನ್ನು ಓದುತ್ತಿರಬಹುದು ಮತ್ತು, “ನಿರೀಕ್ಷೆಯಿಲ್ಲದ ಹತಾಶ ಸ್ಥಿತಿಯಲ್ಲಿದ್ದೇನೆ” ಎಂದು ಯೋಚಿಸುತ್ತಿರಬಹುದು. ಬಹುಶಃ ಅದು ನಿಮ್ಮ ವೈವಾಹಿಕ ಜೀವನವಾಗಿರಬಹುದು, ನಿಮ್ಮ ಮನೆ, ಮಕ್ಕಳ ವಿಷಯವಾಗಿರಬಹುದು, ಆರ್ಥಿಕ ಸ್ಥಿತಿ, ಕೆಲಸ, ವೃತ್ತಿ ಅಥವಾ ವ್ಯಾಪಾರವಾಗಿರಬಹುದು—ಜೀವನದಲ್ಲಿ ಏನು ಬೇಕಾದರೂ ಆಗಿರಬಹುದು. ನಾವೆಲ್ಲರೂ ಇಂಥ ಪರಿಸ್ಥಿತಿಗಳನ್ನು ಎದುರಿಸುತ್ತೇವೆ. ನಾನು ನಿಮಗೆ ಪ್ರೋತ್ಸಾಹಪಡಿಸುವದೇನೆಂದರೆ—ನಿರೀಕ್ಷೆಯನ್ನು ಕಳೆದುಕೊಳ್ಳಬೇಡಿರಿ. ನಿರೀಕ್ಷೆಯನ್ನು ಕಳೆದುಕೊಳ್ಳದೆ ಇರುವದು ಬಹಳ ಪ್ರಾಮುಖ್ಯವಾಗಿದೆ. ನೀವು ನಿರೀಕ್ಷೆಯನ್ನು ಕಳೆದುಕೊಳ್ಳುವಾಗ, ನಿಮ್ಮ ಆಂತರ್ಯ ಮನುಷ್ಯನು ಬಲಹೀನನಾಗುತ್ತಾನೆ. ನೀವು ನಿರೀಕ್ಷೆಯನ್ನು ಕಳೆದುಕೊಳ್ಳುವಾಗ, ನೀವು ಲಂಗರವಿಲ್ಲದ ಹಡಗಿನಂತಾಗುತ್ತೀರಿ. ನೀವು ಮುಳುಗಲು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ. ನೀವು ನಿರೀಕ್ಷೆಯನ್ನು ಕಳೆದುಕೊಳ್ಳುವಾಗ, ನಂಬಿಕೆಯನ್ನು ಅಭ್ಯಾಸ ಮಾಡುವದು ಬಹಳ ಕಷ್ಟವಾಗುತ್ತದೆ ಯಾಕಂದರೆ ನಿರೀಕ್ಷೆಯಿಲ್ಲದೆ ನಂಬಿಕೆ ಇರಲು ಸಾಧ್ಯವಿಲ್ಲ.

ದೇವರಲ್ಲಿ ಮತ್ತು ಆತನ ವಾಕ್ಯದಲ್ಲಿ ನಿರೀಕ್ಷೆಯುಳ್ಳವರಾಗಿರಿ. ನಿಮ್ಮ ಜೀವನದ ವಿಷಯವಾಗಿ ದೇವರು ಏನು ಹೇಳಿದ್ದಾನೆ ಎಂಬದನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ. ನಿಮ್ಮ ಮನೆ ಮತ್ತು ಮದುವೆಯ ವಿಷಯವಾಗಿ ದೇವರ ವಾಗ್ದಾನ ಏನು? ನೀವು ಹೊಂದಿರುವ ವಾಗ್ದಾನಗಳನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. ನಿಮ್ಮ ನಿರೀಕ್ಷೆಗೆ ಆತನ ವಾಕ್ಯವನ್ನು ಕಾರಣವನ್ನಾಗಿ ಮಾಡಿಕೊಳ್ಳಿರಿ. ಯಾಕಂದರೆ ದೇವರೇ ಅದನ್ನು ಹೇಳಿದ್ದಾನೆ, ನಿಮ್ಮ ಪರಿಸ್ಥಿತಿಗಳು ಬದಲಾಗುತ್ತವೆ ಎಂಬದಾಗಿ ನೀವು ಇನ್ನೂ ನಿರೀಕ್ಷೆಯಿಂದಿರಬಹುದು. ದೇವರ ವಾಗ್ದಾನಗಳು ನೆರವೇರುವಾಗ ಹೇಗಿರುತ್ತದೆ ಎಂಬ ಚಿತ್ರವನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿರಿ. ನೀವು ನಿಮ್ಮ ನಿರೀಕ್ಷೆಯನ್ನು ಜೀವಂತವಾಗಿಟ್ಟುಕೊಳ್ಳಲು ಇದು ಸಹಾಯ ಮಾಡುತ್ತದೆ.

ಎಫೆಸದವರಿಗೆ 3:20

ದೇವರು “ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾಗಿದ್ದಾನೆ.”